ಮಂಗಳೂರು: ದ್ವೇಷದ ರಾಜಕಾರಣ ಮಾಡುವ ಪರಿಪಾಠವನ್ನು ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಪ್ರಾರಂಭ ಮಾಡಿದೆ. ಜನ ಸಮಾನ್ಯರ ಕಷ್ಟ ಸುಖದಲ್ಲಿ ಭಾಗಿಯಾಗಲು ಸಾಧ್ಯವಿಲ್ಲದ ಸರಕಾರ ದ್ವೇಷದ ರಾಜಕಾರಣ ಮಾಡಿ ದಿನ ಕಳೆಯುವ ಕೆಲಸದಲ್ಲಿ ತೊಡಗಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದು ರಾಜ್ಯವನ್ನು ಅಭಿವೃದ್ಧಿ ಮಾಡಲು ಅಲ್ಲ”, ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಆರೋಪ ಮಾಡಿದ್ದಾರೆ.
ಅವರು ಶುಕ್ರವಾರದಂದು ಮಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, “ಬಿಜೆಪಿಯ ಶಾಸಕರ ಮೇಲೆ ವಿನಾಕಾರಣ ಮೊಕದ್ದಮೆಗಳನ್ನು ದಾಖಲಿಸುವ ಪ್ರವೃತ್ತಿಯನ್ನು ಸಿದ್ದರಾಮಯ್ಯ ಅವರ ನೇತೃತ್ವದ ಸರಕಾರ ಹಾಕಿಕೊಟ್ಟಿದೆ. ಇನ್ನು ರಾಜ್ಯದಲ್ಲಿ ಕಾಂಗ್ರೆಸ್ ಸರಕಾರವೇ ಆಡಳಿತದಲ್ಲಿ ಇರುತ್ತದೆ ಎನ್ನುವ ಭಾವನೆ ಇದ್ದರೆ ಅದನ್ನು ಮೊದಲಿಗೆ ತೆಗೆದು ಹಾಕಿ. ಈ ರೀತಿಯ ದ್ವೇಷದ ರಾಜಕಾರಣ ಮಾಡಲು ಮುಂದೆ ಬಿಜೆಪಿ ಸರಕಾರ ಬಂದಾಗ ನಮಗೂ ಸಾಧ್ಯವಿದೆ. ಜನಪ್ರತಿಧಿಯಾಗಿ ಸಮಾಜದ ಒಳಿತನ್ನು ಕಾಪಾಡುವ ಶಾಸಕರ ಮೇಲೆಯೇ ವಿನಾಕಾರಣ ಮೊಕದ್ದಮೆ ಹಾಕುವುದನ್ನು ಸಹಿಸಲು ಸಾಧ್ಯವಿಲ್ಲ,” ಎಂದರು.