ಬೆಂಗಳೂರು: ಸಣ್ಣಪುಟ್ಟ ವರ್ತಕರಿಗೆ ನೀಡಿರುವ ತೆರಿಗೆ ನೋಟಿಸ್ ಗಳ ಬಗ್ಗೆ ವಾಣಿಜ್ಯ ತೆರಿಗೆ ಇಲಾಖೆ ಸ್ಪಷ್ಟನೆ ನೀಡಿದೆ.
2017 ರ ಜುಲೈ 1 ರಿಂದ ಸರಕು ಮತ್ತು ಸೇವಾ ತೆರಿಗೆ ಕಾಯ್ದೆಯ ದೇಶಾದ್ಯಂತ ಜಾರಿಗೆ ಬಂದಿದ್ದು, ಈ ಕಾಯ್ದೆಯ ಕಲಂ 22 ರನ್ವಯ ಸರಕು ಪೂರೈಕೆದಾರರ ಸಮಗ್ರ ವಹಿವಾಟು ಒಂದು ಹಣಕಾಸು ವರ್ಷದಲ್ಲಿ 40 ಲಕ್ಷ ರೂಪಾಯಿಗಳನ್ನು ಮೀರಿದರೆ ಅಥವಾ ಸೇವೆಗಳ ಪೂರೈಕೆದಾರರ ಸಮಗ್ರ ವಹಿವಾಟು ಒಂದು ಹಣಕಾಸು ವರ್ಷದಲ್ಲಿ 20 ಲಕ್ಷ ರೂಪಾಯಿಗಳನ್ನು ಮೀರಿದರೆ ಜಿಎಸ್ ಟಿ ನೋಂದಣಿ ಪಡೆಯುವುದು ಕಡ್ಡಾಯವಾಗಿರುತ್ತದೆ ಎಂದು ವಾಣಿಜ್ಯ ತೆರಿಗೆ ಇಲಾಖೆ ಹೇಳಿದೆ.
ಈ ಸಮಗ್ರ ವಹಿವಾಟಿನಲ್ಲಿ ತೆರಿಗೆ ಸಹಿತ ಮತ್ತು ತೆರಿಗೆ ರಹಿತ ಸರಕು ಮತ್ತು ಸೇವೆಗಳು ಸೇರಿರುತ್ತದೆ. ಆದರೆ ತೆರಿಗೆ ಬಾಧ್ಯತೆಯು ತೆರಿಗೆ ಸಹಿತ ಸರಕುಗಳು ಮತ್ತು ಸೇವೆಗಳಿಗೆ ಮಾತ್ರ ಅನ್ವಯವಾಗುತ್ತದೆ. ತೆರಿಗೆ ಬಾಧ್ಯತೆಯು ಮಾರಾಟ ಮಾಡಿದ ಸರಕುಗಳ ಪ್ರಕಾರ ನಿರ್ದರಿಸಲ್ಪಡುತ್ತದೆ. ಉದಾಹರಣೆಗೆ ಬ್ರೆಡ್ ಮಾರಾಟದ ಮೇಲೆ ತೆರಿಗೆ ಇರುವುದಿಲ್ಲ. ಕುರುಕುಲು ತಿಂಡಿಗಳ ಮೇಲೆ 5% ತೆರಿಗೆ ಬಾಧ್ಯತೆ ಇರುತ್ತದೆ.
ವಾಣಿಜ್ಯ ತೆರಿಗೆಗಳ ಇಲಾಖೆಯು ಯುಪಿಐ ಮೂಲಕ ವರ್ತಕರು 2021-22 ರಿಂದ 2024-25ರ ಸಾಲಿನಲ್ಲಿ ಸ್ವೀಕರಿಸಿರುವ ಹಣದ ವಿವರಗಳನ್ನು ವಿವಿಧ ಯುಪಿಐ ಸೇವೆಗಳ ಪೂರೈಕೆದಾರರಿಂದ ಸಂಗ್ರಹಿಸಿದೆ. ಈ ಮಾಹಿತಿಯನ್ನು ಪರಿಶೀಲಿಸಿ 40 ಲಕ್ಷ ರೂಪಾಯಿಗಳಿಗಿಂತ ಹೆಚ್ಚಿನ ಹಣವನ್ನು ಪಡೆದು ಸರಕು ಮತ್ತು ಸೇವಾ ತೆರಿಗೆ ಕಾಯ್ದೆ 2017 ರಡಿಯಲ್ಲಿ ನೋಂದಣಿಯನ್ನು ಪಡೆಯದೇ ಮತ್ತು ತೆರಿಗೆ ಪಾವತಿಸದೇ ಇರುವ ವರ್ತಕರಿಗೆ ನೋಟೀಸ್ ಜಾರಿಗೊಳಿಸಲಾಗಿದ್ದು, ವರ್ತಕರು ತಾವು ಮಾರಾಟ ಮಾಡಿದ ಸರಕು ಮತ್ತು ಸೇವೆಗಳ ವಿವರಗಳನ್ನು ನೀಡಿ ಸರಿಯಾದ ತೆರಿಗೆಯನ್ನು ಪಾವತಿಸಬೇಕಾಗಿರುತ್ತದೆ.
ಅಲ್ಲದೇ, ನೋಟೀಸ್ ನೀಡಲ್ಪಟ್ಟಿರುವ ವರ್ತಕರು ತಕ್ಷಣ ನೋಂದಣಿ ಪಡೆಯಬೇಕಾಗಿದ್ದು, ವಾರ್ಷಿಕ ವಹಿವಾಟು 1.5 ಕೋಟಿ ರೂಪಾಯಿಗಳಿಗಿಂತ ಕಡಿಮೆ ಇರುವ ಸಣ್ಣ ವರ್ತಕರು ರಾಜಿ ತೆರಿಗೆಯನ್ನು ಆಯ್ಕೆ ಮಾಡಿಕೊಂಡು ಇನ್ನು ಮುಂದೆ 1% ತೆರಿಗೆಯನ್ನು ಪಾವತಿಸಬಹುದಾಗಿದೆ.


