ಬೆಂಗಳೂರು: ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ನಡೆದ 2019ರ ಸಾಲಿನ ಅತ್ಯುತ್ತಮ ಸೇವೆ ಸಲ್ಲಿಸಿದ ಪೊಲೀಸ್ ಸಿಬ್ಬಂದಿಗೆ ಮುಖ್ಯಮಂತ್ರಿಗಳ ಪದಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಬೆಳ್ತಂಗಡಿ ಸರ್ಕಲ್ ಇನ್ಸ್ ಪೆಕ್ಟರ್ ಕಛೇರಿಯ ಹೆಡ್ ಕ್ವಾನ್ಟೇಬಲ್ ಅಗಿರುವ ವೆಂಕಟೇಶ್ ನಾಯ್ಕ್ ಗೆ ಮುಖ್ಯಮಂತ್ರಿ ಪದಕ ಪ್ರದಾನ ಮಾಡಲಾಯಿತು.

ದಕ್ಷಿಣ ಕನ್ನಡ ಜಿಲ್ಲೆಯ ಇಬ್ಬರು ಪೊಲೀಸ್ ಅಧಿಕಾರಿಗಳಿಗೆ ಈ ಗೌರವ ಸಂದಿದ್ದು, ವೆಂಕಟೇಶ್ ನಾಯ್ಕ್ ಜೊತೆಗೆ ಬಂಟ್ವಾಳ ಸರ್ಕಲ್ ಇನ್ಸ್ ಪೆಕ್ಟರ್ ಟಿ.ಡಿ. ನಾಗರಾಜ್ ಗೆ ಕೂಡ ಮುಖ್ಯಮಂತ್ರಿ ಪದಕ ಸ್ವೀಕರಿಸಿದರು.
ಇಂದು ವಿಧಾನಸೌಧದಲ್ಲಿ ನಡೆದ ಸಮಾರಂಭದಲ್ಲಿ ಅಸಾಧಾರಣ ಸೇವೆ ಸಲ್ಲಿಸಿದ 118 ಮಂದಿ ಪೊಲೀಸ್ ಸಿಬ್ಬಂದಿಗೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪರವರು ಮುಖ್ಯಮಂತ್ರಿಗಳ ಪದಕ ನೀಡಿ ಗೌರವಿಸಿದರು. ಈ ವೇಳೆ ಗೃಹಸಚಿವ ಬಸವರಾಜ್ ಬೊಮ್ಮಾಯಿ, ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್‍ಸೂದ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಹಾಜರಿದ್ದರು.
ಪದಕ ಪುರಸ್ಕೃತ ವೆಂಕಟೇಶ್ ನಾಯ್ಕ್ ಬಗ್ಗೆ..
ಕಳೆದ 6 ವರ್ಷಗಳಿಂದ ಬೆಳ್ತಂಗಡಿಯ ವೃತ್ತ ನೀರೀಕ್ಷಕರ ಕಚೇರಿಯಲ್ಲಿ ಹೆಡ್ ಕಾನ್ಸ್ ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಉಜಿರೆಯ ಎಸ್.ಆರ್ ಬಾರ್ ಬಳಿಯ ಕೊಲೆ ಪ್ರಕರಣ, ಕೊಯ್ಯೊರು ಲಾಯಿಲ ಮತ್ತು ವೇಣೂರುನಲ್ಲಿ ನಡೆದಿದ್ದ ಪೋಕ್ಸೋ ಪ್ರಕರಣ, ಮರೋಡಿ ಲೈಂಗಿಕ ಹಲ್ಲೆ ಪ್ರಕರಣ, ಈ ಹಿಂದೆ ವಿಟ್ಲ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ನಡೆದಿದ್ದ ಕೊಲೆ ಪ್ರಕರಣ ಹೀಗೆ ಅನೇಕ ಅಪರಾಧ ಪ್ರಕರಣಗಳ ತನಿಖಾ ಸಹಾಯಕರಾಗಿ ಆರೋಪಿಗಳಿಗೆ ಶಿಕ್ಷೆಯಾಗಲು ನ್ಯಾಯಾಲಯಕ್ಕೆ ಸೂಕ್ತ ಸಾಕ್ಷಿ ಪುರಾವೆಯನ್ನು ಸಲ್ಲಿಸಿರುವ ಶ್ರೇಷ್ಠ ಕಾರ್ಯಕ್ಕೆ ಈ ಪುರಸ್ಕಾರ ಸಂದಿದೆ.
ಈ ಬಾರಿಯ ಮುಖ್ಯಮತ್ರಿ ಪದಕದ ಜೊತೆಗೆ ಇವರ ಅತ್ಯುನ್ನತ ಸೇವೆಗೆ 17 ಬಾರಿ ಇಲಾಖೆಯಿಂದ ನಗದು ಪುರಸ್ಕಾರ, 10 ಬಾರಿ ಪ್ರಶಂಸಾ ಪತ್ರ, ಉತ್ತಮ ತನಿಖಾ ಸಹಾಯಕ ಪ್ರಶಸ್ತಿ ಸೇರಿದಂತೆ ಹಲವು ಪುರಸ್ಕಾರಗಳು ಇವರನ್ನು ಹುಡುಕಿಕೊಂಡು ಬಂದಿವೆ.
ಮೂಲತಃ ಮಂಗಳೂರಿನ ಕೊಂಪದವು ರುಕ್ಮ ನಾಯ್ಕ್ ಮತ್ತು ಗೋಪಿ ದಂಪತಿಯ ಪುತ್ರನಾಗಿರುವ ಇವರು 1996ರಲ್ಲಿ ಪೊಲೀಸ್ ಇಲಾಖೆಗೆ ಸೇರ್ಪಡೆಗೊಂಡರು. ಉಡುಪಿ ಸಂಚಾರಿ ಠಾಣೆ, ಉಪ್ಪಿನಂಗಡಿ ಠಾಣೆ, ವಿಟ್ಲ ಠಾಣೆಯಲ್ಲಿ ಪೊಲೀಸ್ ಕಾನ್ಸ್ಟೇಬಲ್ ಆಗಿ ಕರ್ತವ್ಯ ನಿರ್ವಹಿಸಿದ್ದು, 2014ರಲ್ಲಿ ಹೆಡ್ ಕಾನ್ಸ್ಟೇಬಲ್ ಆಗಿ ಪದೋನ್ನತಿ ಪಡೆದು, ಬೆಳ್ತಂಗಡಿಯ ವೃತ್ತ ನೀರೀಕ್ಷಕರ ಕಚೇರಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ವೆಂಕಟೇಶ್ ನಾಯ್ಕ್ ರ ಪತ್ನಿ ವಸಂತಿ ಮುಂಡಾಜೆ ಪದವಿ ಪೂರ್ವ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದು, ಇವರ ಪುತ್ರಿ ವರ್ಷಿಣಿ ಉಜಿರೆ ಅನುಗ್ರಹ ಶಾಲೆಯಲ್ಲಿ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ


