ಮಂಗಳೂರು ನಗರದ ಮೂಡಬಿದ್ರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಿನಾಂಕ 05-08-2024 ರಂದು ಸುಂದರಿ ಪೂಜಾರಿ (73 ವರ್ಷ) ರವರು ತನ್ನ ಮಗಳ ಮನೆಯಾದ ಅಶ್ವಥಪುರಕ್ಕೆ ಹೋಗಲು ನಾರಾವಿಯಿಂದ ಬಸ್ಸಿನಲ್ಲಿ ಹೊರಟು ಮದ್ಯಾಹ್ನ ಸುಮಾರು 2.30 ಗಂಟೆಗೆ ಮೂಡಬಿದ್ರೆಯ ಬಸ್ ಸ್ಯಾಂಡ್ ಗೆ ಬಂದು ಇಳಿದು ಹಣ್ಣು ತರಲೆಂದು ಅಂಗಡಿಗೆ ಹೋಗಿದ್ದು, ಅಲ್ಲಿ ಯಾರೋ ಅಪರಿಚಿತ ವ್ಯಕ್ತಿಯೊಬ್ಬ ಸುಂದರಿ ಪೂಜಾರಿ ರವರ ಬಳಿಗೆ ಬಂದು ಅವರ ಕೊರಳಲ್ಲಿದ್ದ ಚಿನ್ನದ ಸರವನ್ನು ನೋಡಿ, ಪರಿಚಿತನಂತೆ ವರ್ತಿಸಿ ಇದೇ ರೀತಿಯ ಚಿನ್ನದ ಸರವನ್ನು ಮಾಡಿಸಬೇಕಿದೆ ಎಂದು ನಂಬಿಸಿ ಅವರಲ್ಲಿದ್ದ ಚಿನ್ನದ ಸರವನ್ನು ಪಡೆದುಕೊಂಡು ಹೋಗಿದ್ದು, ವಾಪಸು ನೀಡದೇ ಮೋಸ ಮಾಡಿರುವ ಬಗ್ಗೆ ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆಯಲಿರುತ್ತದೆ.
ಪ್ರಕರಣದ ಆರೋಪಿ ಮತ್ತು ಸೊತ್ತು ಪತ್ತೆಯ ಬಗ್ಗೆ, ಮೂಡಬಿದ್ರೆ ಪೊಲೀಸರು ಕಾರ್ಯಾಚರಣೆ ನಡೆಸಿ ವಿವಿದ ಪೊಲೀಸ್ ಠಾಣೆಗಳಲ್ಲಿ ವಂಚನೆ ಮತ್ತು ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿರುವ ಸುರೇಶ್ @ ಸಂತೋಷ ಪ್ರಾಯ: 60 ವರ್ಷ, ತಂದೆ: ದಿ: ಸೀನ ನಾಯ್ಕ, ಹಾಲಿ ವಾಸ: ಕೆಂಪುಗುಡ್ಡೆ, ಕಸವಿತ್ತಲ್ ಮನೆ, ಬಂಟ್ವಾಳ ತಾಲೂಕು ಎಂಬಾತನನ್ನು ಬಂಧಿಸಿ ಆರೋಪಿಯಿಂದ ಪ್ರಕರಣದಲ್ಲಿ ವ್ಯದ ಮಹಿಳೆಗೆ ವಂಚನೆ ಮಾಡಿ ಪಡೆದ ಸುಮಾರು ಎರಡೂವರೇ ಪವನ್ ತೂಕದ ಚಿನ್ನದ ಸರ ಮತ್ತು 2023 ನೇ ಇಸವಿಯ ನವಂಬರ್ ತಿಂಗಳಿನಲ್ಲಿ ಕಾರ್ಕಳ ತಾಲೂಕು ಕಸಬ, ಮನ್ನು ಗೋಪುರದ ಬಳಿ ನಡೆದುಕೊಂಡು ಹೋಗುತ್ತಿದ್ದ ವೃದ್ಧ ಮಹಿಳೆಯನ್ನು ವಂಚನೆ ಮಾಡಿ ಪಡೆದ ಸುಮಾರು ಒಂದುವರೇ ಪವನ್ ತೂಕದ ಹವಳ ಇರುವ ಚಿನ್ನದ ಸರವನ್ನು ಕೂಡ ಆರೋಪಿಯಿಂದ ಸ್ವಾಧಿನಪಡಿಸಿಕೊಂಡಿರುವುದಾಗಿದೆ. ಆರೋಪಿಯಿಂದ ಒಟ್ಟು 36 ಗ್ರಾಂ ತೂಕದ 2 ಚಿನ್ನದ ಸರಗಳ ಅಂದಾಜು 2,50,000/- ರೂ ಮೌಲ್ಯದ ಸೊತ್ತುಗಳನ್ನು ಸ್ವಾಧಿನಪಡಿಸಿಕೊಳ್ಳಲಾಗಿದೆ.
ಪ್ರಕರಣದಲ್ಲಿ ದಸ್ತಗಿರಿಯಾಗಿರುವ ಆರೋಪಿಯ ವಿರುದ್ಧ ದ.ಕ ಜಿಲ್ಲೆ, ಪುತ್ತೂರು ಟೌನ್ ಪೊಲೀಸ್ ಠಾಣೆಯ ಪ್ರಕರಣ ಒಂದರಲ್ಲಿ ಮಾನ್ಯ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೇ ಇದ್ದ ಕಾರಣ, ಮಾನ್ಯ ನ್ಯಾಯಾಲಯವು ಈತನ ವಿರುದ್ಧ ದಸ್ತಗಿರಿ ವಾರೆಂಟ್ ಹೊರಡಿಸಿರುತ್ತಾರೆ.ಈ ಪ್ರಕರಣದಲ್ಲಿ ಮಂಗಳೂರು ನಗರದ ಮಾನ್ಯ ಪೊಲೀಸ್ ಆಯುಕ್ತರಾದ ಶ್ರೀ ಅನುಪಮ್ ಅಗರ್ವಾಲ್, IPS ರವರ ಮಾರ್ಗದರ್ಶನದಂತೆ, ಮಾನ್ಯ DCP ಯವರಾದ ಶ್ರೀ ಸಿದ್ದಾರ್ಥ ಗೊಯಲ್ IPS (ಕಾ&ಸು), ಶ್ರೀ ದಿನೇಶ್ ಕುಮಾರ್ DCP (ಅ& ಸಂ) ಮತ್ತು ಮಂಗಳೂರು ಉತ್ತರ ಉಪ ವಿಭಾಗದ ಮಾನ್ಯ ACP ಶ್ರೀ ಶ್ರೀಕಾಂತ್. ಕೆ ರವರ ನಿರ್ದೇಶನದಂತೆ, ಈ ಕಾರ್ಯಚರಣೆಯಲ್ಲಿ ಮೂಡಬಿದ್ರೆ ಠಾಣಾ ಪೊಲೀಸ್ ನಿರೀಕ್ಷಕರಾದ ಶ್ರೀ ಸಂದೇಶ್ ಪಿ.ಜಿ ರವರ ನೇತೃತ್ವದ ತಂಡ ಶ್ರೀ ಕೃಷ್ಣಪ್ಪ ಪೊಲೀಸ್ ಉಪ ನಿರೀಕ್ಷಕರು ಹಾಗೂ ಠಾಣಾ ಅಪರಾಧ ವಿಭಾಗದ ಸಿಬ್ಬಂಧಿಯವರಾದ ಮೊಹಮ್ಮದ್ ಇಕ್ಬಾಲ್, ಮೊಹಮ್ಮದ್ ಹುಸೇನ್, ಅಕೀಲ್ ಅಹಮ್ಮದ್, ನಾಗರಾಜ್, ವೆಂಕಟೇಶ್ ರವರುಗಳು ಕಾರ್ಯಚರಣೆಯಲ್ಲಿ ಪಾಲ್ಗೊಂಡಿರುತ್ತಾರೆ.