ಮಂಗಳೂರು : ರಾಜ್ಯದಲ್ಲೆಡೆ ಮಳೆಯ ಅಬ್ಬರ ಜೋರಾಗಿದ್ದು, ಕರಾವಳಿ ಜಿಲ್ಲೆಗಳಲ್ಲೂ ಕಳೆದ ಕೆಲವು ದಿನಗಳಿಂದ ಭಾರೀ ಮಳೆ ಸುರಿಯುತ್ತಿದೆ. ಮಳೆಯಿಂದಾಗಿ 11 ಶಾಲೆಗಳು ಹಾನಿಗೊಂಡಿದ್ದು, ಇದೀಗ ಕೇಂದ್ರ ಸರ್ಕಾರದ ಸಮಗ್ರ ಶಿಕ್ಷಾ ಯೋಜನೆಯಡಿ 2023-24 ಹಾಗೂ 2024-25ನೇ ಸಾಲಿನಲ್ಲಿ ದುರಸ್ತಿಗೊಳಿಸುವುದಕ್ಕೆ ಅನುಮೋದನೆ ನೀಡಲಾಗಿದೆ ಎಂದು ಶಿಕ್ಷಣ ಖಾತೆ ರಾಜ್ಯ ಸಚಿವ ಜಯಂತ್ ಚೌಧರಿ ತಿಳಿಸಿದ್ದಾರೆ.
ಲೋಕಸಭೆಯಲ್ಲಿ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಈ ಕುರಿತಂತೆ ಮಾತನಾಡಿದ್ದು, ಕೇಂದ್ರದ ಸಮಗ್ರ ಶಿಕ್ಷಾ ಯೋಜನೆಯಡಿ ಹಾನಿಗೊಳಗಾದ ಶಾಲೆಗಳನ್ನು ದುರಸ್ತಿಗೊಳಿಸಲಾಗುವುದು ಎಂದು ಶಿಕ್ಷಣ ಖಾತೆ ರಾಜ್ಯ ಸಚಿವರು ಹೇಳಿದ್ದಾರೆ.
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಕ್ಯಾ. ಚೌಟ ಅವರು, ʻ11 ಶಾಲೆಗಳ ದುರಸ್ತಿಗೆ ಕೇಂದ್ರ ಸರ್ಕಾರದ ಸಮಗ್ರ ಶಿಕ್ಷಾ ಯೋಜನೆಯಡಿ ಆದ್ಯತೆ ಸಿಕ್ಕಿದ್ದು ಖುಷಿಯಾಗಿದೆ. ಮುಂದಿನ ದಿನಗಳಲ್ಲಿ ದಕ್ಷಿಣ ಕನ್ನಡದ 290 ಶಾಲೆಗಳ ದುರಸ್ತಿ ಕಾರ್ಯಕ್ಕೂ ಕೇಂದ್ರ ಸರ್ಕಾರದಿಂದ ಹೆಚ್ಚಿನ ಆರ್ಥಿಕ ನೆರವು ಪಡೆಯುವುದಕ್ಕೆ ಎಲ್ಲ ರೀತಿಯ ಪ್ರಯತ್ನ ಮಾಡಲಾಗುವುದು,ʼ ಎಂದು ಭರವಸೆ ನೀಡಿದ್ದಾರೆ ಎನ್ನಲಾಗಿದೆ.


