ಪುತ್ತೂರು : ಪುಡಾ ಅಧ್ಯಕ್ಷ ಸ್ಥಾನಕ್ಕೆ ಭಾಸ್ಕರ ಕೋಡಿಂಬಾಳ ಅಧಿಕಾರ ಸ್ವೀಕರಿಸಿದ ನಾಲ್ಕೇ ತಿಂಗಳಲ್ಲಿ ರಾಜೀನಾಮೆ ಸಲ್ಲಿಸಿದ್ದು, ಈ ನಿರ್ಧಾರ ಕೈಗೊಂಡಿದ್ದಕ್ಕೆ ಶಾಸಕ ಅಶೋಕ್ ಕುಮಾರ್ ರೈ ಅವರ ಮಾತೇ ಕಾರಣ ಎಂಬುವುದು ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.
ಭಾಸ್ಕರ ಕೋಡಿಂಬಾಳ ಅವರು ಶನಿವಾರದಂದು ಪತ್ರಿಕಾಗೋಷ್ಠಿ ನಡೆಸಿ, ತಮ್ಮ ರಾಜೀನಾಮೆ ನಿರ್ಧಾರವನ್ನು ಪ್ರಕಟಿಸಿದರು. ಜು.11ರಂದು ಶಾಸಕರು ನನಗೆ ಕರೆ ಮಾಡಿ, ಪುಡಾ ಸತ್ತಿದೆ, ನಿಮ್ಮ ಕೆಲಸ ಸಾಲದು ಎಂದರು. ನಾನು ಸ್ವಾಭಿಮಾನಿ, ಇಂದು ನನ್ನನ್ನು ಯಾರು ನೇಮಿಸಿದರೋ ಅವರಿಗೆ ಅಸಮಾಧಾನ ಇದೆಯೋ ಗೊತ್ತಿಲ್ಲ, ಆದರೆ ಶಾಸಕರ ಮಾತಿನಿಂದ ನನಗೆ ನೋವಾಗಿದೆ ಎಂದರು.
ಮಾ.16ರಂದು ನಾನು ಪದಗ್ರಹಣ ಸ್ವೀಕರಿಸಿದ್ದು, ಬಳಿಕ ಜಾರಿಯಾದ ಚುನಾವಣೆ ನೀತಿ ಸಂಹಿತೆ ಜೂ.5 ರ ವರೆಗೆ ಇತ್ತು. 22 ದಿನದಲ್ಲಿ ಕಟ್ ಕನ್ವರ್ಶನ್ ಸಹಿತ ಹಲವು ಕೆಲಸಗಳನ್ನು ಮಾಡಿದ್ದೇನೆ ಎಂದು ಹೇಳಿದರು. ನನ್ನನ್ನು ಶಾಸಕರೇ ಆಯ್ಕೆ ಮಾಡಿದ್ದರು, ನಾನು ಪುಡಾ ಅಧ್ಯಕ್ಷತೆಗೆ ಆಸೆ ಪಟ್ಟವನಲ್ಲ. ಅವರಿಗೆ ನನ್ನ ಕಾರ್ಯವೈಖರಿ ಇಷ್ಟವಾಗದಿದ್ದಾಗ ರಾಜೀನಾಮೆ ಸೂಕ್ತ. ಹಾಗಾಗಿ ರಾಜೀ ನಾಮೆ ಪತ್ರವನ್ನು ಸರಕಾರಕ್ಕೆ ರಿಜಿಸ್ಟರ್ ಪೋಸ್ಟ್ ಮೂಲಕ ಕಳುಹಿಸಿದ್ದೇನೆ. ಅದನ್ನು ಹಿಂಪಡೆಯುವ ಪ್ರಶ್ನೆಯೇ ಇಲ್ಲ. ಪಕ್ಷವು ನನಗೆ ಹಲವು ಹುದ್ದೆ ನೀಡಿದ್ದು, ನಿಭಾಯಿಸಿದ್ದೇನೆ ಎಂದರು.
ಈ ಕುರಿತು ಪ್ರತಿಕ್ರಯಿಸಿದ ಶಾಸಕ ಅಶೋಕ್ ಕುಮಾರ್ ರೈ, ’ಕಟ್ ಕನ್ವರ್ಶನ್ ಸಮಸ್ಯೆ ಸಹಿತ ಹಲವು ವಿಷಯಗಳ ಬಗ್ಗೆ ನಿರ್ಣಯ ಕೈಗೊಂಡು ಸರಕಾರಕ್ಕೆ ಕಳುಹಿಸುವಂತೆ 3 ವಾರಗಳ ಹಿಂದೆಯೇ ತಿಳಿಸಿದ್ದೆ. ಆ ಕೆಲಸ ಆಗಿಲ್ಲ. ಇದನ್ನು ದೂರವಾಣಿ ಮೂಲಕ ಕೇಳಿದ್ದು ಬಿಟ್ಟರೆ, ಅವರಿಗೆ ನೋವಾಗುವಂತೆ ವರ್ತಿಸಿಲ್ಲ,’ ಎಂದರು.


