ಬೆಂಗಳೂರು: ನಾಮಕರಣ ಶಾಸ್ತ್ರಕ್ಕೆ ಪತ್ನಿ ಹಾಗೂ ಆಕೆಯ ಕುಟುಂಬಸ್ಥರು ತಡವಾಗಿ ಬಂದರು ಎಂಬ ಕ್ಷುಲ್ಲಕ ಕಾರಣಕ್ಕೆ ಆಕ್ರೋಶಗೊಂಡ ರಾಕ್ಷಸ ಮನಸ್ಥಿತಿಯ ತಂದೆಯೊಬ್ಬ ತನ್ನದೇ 11 ತಿಂಗಳ ಹೆಣ್ಣು ಮಗುವನ್ನು ನೆಲಕ್ಕೆ ಎಸೆದು ಭೀಕರ ಕ್ರೌರ್ಯ ಮೆರೆದಿರುವ ಘಟನೆ ನಗರದ ಬನಶಂಕರಿ 2ನೇ ಹಂತದಲ್ಲಿ ನಡೆದಿದೆ.
ಜುಲೈ 17ರಂದು ಬನಶಂಕರಿಯ ‘ಗೋಕುಲ್ ವೆಜ್’ ಪಾರ್ಟಿ ಹಾಲ್‌ನಲ್ಲಿ ಮಗುವಿನ ನಾಮಕರಣ ಕಾರ್ಯಕ್ರಮ ಆಯೋಜಿಸಲಾಗಿತ್ತು. ಹೆಸರುಘಟ್ಟದ ತವರು ಮನೆಯಿಂದ ಪತ್ನಿ ರಮ್ಯಾ ಹಾಗೂ ಆಕೆಯ ಕುಟುಂಬಸ್ಥರು ನಿಗದಿತ ಸಮಯಕ್ಕಿಂತ ಒಂದು ಗಂಟೆ ತಡವಾಗಿ ಬಂದಿದ್ದರೆನ್ನಲಾಗಿದೆ. ಇದರಿಂದ ಕೋಪಗೊಂಡ ಪತಿ ವಿನಾಯಕ್, ಬಂದಿದ್ದ ಅತಿಥಿಗಳ ಎದುರಲ್ಲೇ ಜಗಳ ತೆಗೆದಿದ್ದಾನೆ.
ಪ್ರಶ್ನಿಸಲು ಬಂದ ಮಾವ ಹಾಗೂ ಪತ್ನಿಯ ಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದಾನೆ. ಈ ಸಂದರ್ಭದಲ್ಲಿ ಗಲಾಟೆ ಬಿಡಿಸಲು ಬಂದ ಮಾವನ ಕಂಕುಳಲ್ಲಿದ್ದ 11 ತಿಂಗಳ ಹಸುಗೂಸನ್ನು ಕಸಿದುಕೊಂಡ ವಿನಾಯಕ್, ಕ್ರೌರ್ಯದ ಮಿತಿಮೀರಿ ಮಗುವನ್ನು ನೆಲಕ್ಕೆ ಬಿಸಾಡಿದ್ದಾನೆ.
ನೆಲಕ್ಕೆ ಬಿದ್ದ ರಭಸಕ್ಕೆ ಮಗುವಿನ ತಲೆಗೆ ತೀವ್ರ ಸ್ವರೂಪದ ಗಾಯಗಳಾಗಿದ್ದು, ಪ್ರಸ್ತುತ ಮಗು ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದೆ. ಜಗಳ ಬಿಡಿಸಲು ಬಂದ ಹೋಟೆಲ್ ಸಿಬ್ಬಂದಿಯ ಮೇಲೆಯೂ ಈತ ಹಲ್ಲೆ ನಡೆಸಿದ್ದಾನೆ. ಪತ್ನಿ ರಮ್ಯಾ ನೀಡಿದ ದೂರಿನನ್ವಯ ಬನಶಂಕರಿ ಪೊಲೀಸ್ ಠಾಣೆಯಲ್ಲಿ ಬಿಎನ್‌ಎಸ್ (BNS) ಹಾಗೂ ಜುವೆನೈಲ್ ಜಸ್ಟಿಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಆರೋಪಿ ವಿನಾಯಕ್‌ನನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.


