ಬೆಳ್ತಂಗಡಿ : ವಿದ್ಯಾರ್ಥಿಗಳ ಜೀವನ ಜೊತೆ ಕಾಲೇಜ್ ಆಡಳಿತ ಮಂಡಳಿ ಅನಧಿಕೃತವಾಗಿ ಲಾಡ್ಜ್ ನಲ್ಲಿ ಇರಿಸಿಕೊಂಡು ಚೆಲ್ಲಾಟವಾಡುತ್ತಿರುವ ಘಟನೆ ಬೆಳ್ತಂಗಡಿಯ ಕಾಶಿಬೆಟ್ಟುವಿನಲ್ಲಿ ನಡೆಯುತ್ತಿದೆ.

ಬೆಳ್ತಂಗಡಿ ತಾಲೂಕಿನ ಲಾಯಿಲ ಗ್ರಾಮದ ಕಾಶಿಬೆಟ್ಟು, ಪ್ರಗತಿನಗರದಲ್ಲಿರುವ ಕಾರ್ತಿಕೇಯನ್ ಮಾಲೀಕತ್ವದ ಅಭ್ಯಾಸ್ ಪ್ರೀ ಯೂನಿವರ್ಸಿಟಿ ಕಾಲೇಜಿನ 50 ಕ್ಕೂ ಮಿಕ್ಕಿ ಅಪ್ರಾಪ್ತ ಕಾಲೇಜ್ ವಿದ್ಯಾರ್ಥಿಗಳನ್ನು ಯಾವುದೇ ಇಲಾಖೆಗಳ ಅನುಮತಿಯನ್ನು ಪಡೆದುಕೊಳ್ಳದೆ ಅನಧಿಕೃತವಾಗಿ ಕಾಶಿಬೆಟ್ಟುನಲ್ಲಿರುವ ಖಾಸಗಿ ಲಾಡ್ಜ್ ನಲ್ಲಿ ಮಾಲೀಕರಿಗೆ ತಿಂಗಳಿಗೆ 1.5 ಲಕ್ಷ ಬಾಡಿಗೆ ನೀಡಿ ಕಾಲೇಜ್ ಬೋರ್ಡ್ ಹಾಕಿ ಹಾಸ್ಟೆಲ್ ಮಾಡಿಕೊಂಡು ಇರಿಸಿಕೊಂಡಿದ್ದಾರೆ. ಅನಧಿಕೃತವಾಗಿ ಅಪ್ರಾಪ್ತ ಬಾಲಕರನ್ನು ಇರಿಸಿಕೊಂಡು ಏನಾದರೂ ಅನಾಹುತಗಳು ನಡೆದರೆ ಯಾರು ಹೊಣೆ ಎಂಬ ಮಾತುಗಳು ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ.
ಲಾಯಿಲ ಗ್ರಾಮ ಪಂಚಾಯತ್ ಮತ್ತು ಪಿಯು ಇಲಾಖೆಯಿಂದ ಅಪ್ರಾಪ್ತ ಬಾಲಕರ ಹಾಸ್ಟೆಲ್ ಮಾಡಿಕೊಂಡು ಇರಿಸಿರುವ ಬಗ್ಗೆ ಯಾವುದೇ ಅನುಮತಿಯನ್ನು ಪಡೆದುಕೊಂಡಿಲ್ಲ ಎಂಬ ದೂರಿನ ಮೇರೆಗೆ ಲಾಯಿಲ ಗ್ರಾಮ ಪಂಚಾಯತ್ ನೋಟಿಸ್ ಜಾರಿ ಮಾಡಿದೆ. ಈ ಬಗ್ಗೆ ಎಚ್ಚೆತ್ತ ಕಾಲೇಜ್ ಆಡಳಿತ ಮಂಡಳಿ ಲಾಡ್ಜ್ ಕಟ್ಟಡದಲ್ಲಿ ಹಾಕಿದ್ದ ಕಾಲೇಜ್ ಬೋರ್ಡ್ ತೆಗೆದಿದ್ದು ಅದಲ್ಲದೆ ಲಾಡ್ಜ್ ಹೆಸರಿಗೂ ಬಣ್ಣ ಹಚ್ಚಿ ಮರೆಮಾಚಿದ್ದಾರೆ. ಅಭ್ಯಾಸ್ ಕಾಲೇಜಿನ ಹಾಸ್ಟೆಲ್ ನ ಅಕ್ರಮ ಕಟ್ಟಡಗಳಿಗೆ ಈ ಹಿಂದೆ ಗ್ರಾಮ ಪಂಚಾಯತ್ ಟೇಪ್ ಹಾಕಿ ಬ್ಯಾನರ್ ಕೂಡ ಹಾಕಿತ್ತು.

ಈ ಬಗ್ಗೆ ಪಿಯು ಇಲಾಖೆ ಇನ್ನೂ ನಿದ್ರೆಯಲ್ಲಿದ್ದು ಆದಷ್ಟು ಬೇಗ ಇತ್ತ ಗಮನಹರಿಸಿ ಅಭ್ಯಾಸ್ ಪ್ರೀ ಯೂನಿವರ್ಸಿಟಿ ಕಾಲೇಜಿನ ಆಡಳಿತ ಮಂಡಳಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿದೆ.


