
ಬೆಳ್ತಂಗಡಿ : ಶ್ರೀ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ, ದಕ್ಷಿಣ ಕನ್ನಡ ಜಿಲ್ಲಾ ಘಟಕ ವತಿಯಿಂದ ಜು.28 ರಂದು ಖಾಸಗಿ ಸಭಾಭವನದಲ್ಲಿ ನಡೆದ 2025–26ನೇ ಸಾಲಿನಲ್ಲಿ ಬೆಳ್ತಂಗಡಿ ತಾಲೂಕಿನಲ್ಲಿ ಗಾರೆಕೆಲಸ, ಬಡಗಿ, ಅಕ್ಕಸಾಲಿಗ, ಕಮ್ಮಾರ, ಎಲೆಕ್ಟ್ರಿಷಿಯನ್ ಹಾಗೂ ಟೈಲರಿಂಗ್ ವೃತ್ತಿಯಲ್ಲಿ ತೊಡಗಿರುವ ಅರ್ಹ ಫಲಾನುಭವಿಗಳಿಗೆ ವಿದ್ಯುತ್ ಚಾಲಿತ ಹೊಲಿಗೆ ಯಂತ್ರ ಹಾಗೂ ಉಚಿತ ಸುಧಾರಿತ ಉಪಕರಣಗಳ ವಿತರಣಾ ಕಾರ್ಯಕ್ರಮದ ವೇದಿಕೆಯ ಬ್ಯಾನರ್‌ನಲ್ಲಿ ರಾಜ್ಯದ ಗೌರವಾನ್ವಿತ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳ ಭಾವಚಿತ್ರಗಳನ್ನು ಪ್ರಕಟಿಸದೆ ಕೇವಲ ಬೆಳ್ತಂಗಡಿ ಶಾಸಕ ಹರೀಶ್ ಪೂಂಜರವರ ಭಾವಚಿತ್ರವನ್ನು ಮಾತ್ರ ಅಳವಡಿಸಿರುವ ಕುರಿತು ಯುವ ಕಾಂಗ್ರೆಸ್ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಉಪಾಧ್ಯಕ್ಷ ನವೀನ್ ಗೌಡ ಸವಣಾಲು ಜು.29 ರಂದು ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದರು.

ಈ ದೂರಿನ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ನಿರ್ದೇಶನದಂತೆ ಶ್ರೀ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ದಕ್ಷಿಣ ಕನ್ನಡ ಜಿಲ್ಲಾ ವ್ಯವಸ್ಥಾಪಕರಿಗೆ ಕಾರಣ ಕೇಳಿ ಜು.31 ರಂದು ನೋಟಿಸ್ ಜಾರಿಗೊಳಿಸಲಾಗಿದೆ.ನೋಟಿಸ್‌ನಲ್ಲಿ ಸರ್ಕಾರಿ ಸಭೆ-ಸಮಾರಂಭಗಳಲ್ಲಿ ಕಡ್ಡಾಯವಾಗಿ ಶಿಷ್ಟಾಚಾರ ಪಾಲಿಸುವಂತೆ ಸರ್ಕಾರವು ಅನೇಕ ಬಾರಿ ಸುತ್ತೋಲೆಗಳು ಹಾಗೂ ಮಾರ್ಗಸೂಚಿಗಳನ್ನು ಹೊರಡಿಸಿದ್ದರೂ, ಸಂಬಂಧಿತ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಉಲ್ಲಂಘಿಸಿ ಕರ್ತವ್ಯ ಲೋಪ ಎಸಗಿರುವುದು ಕಂಡುಬಂದಿದೆ ಎಂದು ಉಲ್ಲೇಖಿಸಲಾಗಿದೆ.

ಅಲ್ಲದೆ, ಈ ನಡೆ ಕರ್ನಾಟಕ ನಾಗರಿಕ ಸೇವಾ (ನಡತೆ) ನಿಯಮಾವಳಿ–2021ರ ನಿಯಮ (3)ರ ಉಲ್ಲಂಘನೆಯಾಗಿರುವ ಹಿನ್ನೆಲೆಯಲ್ಲಿ, ಸಂಬಂಧಪಟ್ಟ ಅಧಿಕಾರಿಯ ವಿರುದ್ಧ ಏಕ ಶಿಸ್ತಿನ ಕ್ರಮ ಜರುಗಿಸಬಾರದು ಎಂಬ ಕುರಿತು ಈ ನೋಟಿಸ್ ಸ್ವೀಕರಿಸಿದ ದಿನದಿಂದ ಮೂರು ದಿನಗಳೊಳಗೆ ಲಿಖಿತ ವಿವರಣೆ ಸಲ್ಲಿಸುವಂತೆ ಸೂಚಿಸಲಾಗಿದೆ.ನಿಗದಿತ ಅವಧಿಯೊಳಗೆ ಸಮರ್ಪಕ ವಿವರಣೆ ಸಲ್ಲಿಸಲು ವಿಫಲವಾದಲ್ಲಿ, ಯಾವುದೇ ವಿವರಣೆ ಇಲ್ಲವೆಂದು ಪರಿಗಣಿಸಿ ನಿಯಮಾನುಸಾರ ಮುಂದಿನ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ನೋಟಿಸ್‌ನಲ್ಲಿ ಎಚ್ಚರಿಕೆ ನೀಡಲಾಗಿದೆ.


