ಬೆಳ್ತಂಗಡಿ: ನಾವೂರು ಗ್ರಾಮದ ನಾವೂರು ಸ್ವಾತಿ ಕಟ್ಟಡದಲ್ಲಿರುವ ಡಾ. ಪ್ರದೀಪ್ ಅವರ ಆರೋಗ್ಯ ಕ್ಲಿನಿಕ್ಗೆ ಡಿಸೇಲ್ ಸುರಿದು ಬೆಂಕಿ ಹಚ್ಚಿದ ಪ್ರಕರಣದ ತನಿಖೆಯನ್ನು ಆರಂಭಿಸಿದ ಬೆಳ್ತಂಗಡಿ ಪೊಲೀಸರು ಪೂರಕ ಸಾಕ್ಷಧಾರಗಳನ್ನು ಸಂಗ್ರಹಿಸಿ ಪ್ರಕರಣದ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕ್ಲಿನಿಕ್ ಗೆ ಡಿಸೇಲ್ ಸುರಿದು ಬೆಂಕಿ ಹಚ್ಚಿದ ಪ್ರಕರಣದ ಪ್ರಮುಖ ಆರೋಪಿ ಬೆಳ್ತಂಗಡಿ ತಾಲೂಕಿನ ನಾವೂರು ಗ್ರಾಮದ ನಿವಾಸಿಗಳಾದ ರವಿ ಕುಮಾರ್(31) ಹಾಗೂ ಬೆಂಕಿ ಹಚ್ಚಲು ಕುಮ್ಮಕು ನೀಡಿದ ಸುರೇಶ್ ಪಿ.ಎನ್(44) ಮತ್ತು ದಿನೇಶ್ ಪ್ರಭು(51) ಎಂಬವರನ್ನು ಬೆಳ್ತಂಗಡಿ ಪೊಲೀಸರು ಅ.14 ರಂದು ರಾತ್ರಿ ಬಂಧಿಸಿದ್ದಾರೆ. ಬಂಧಿತ ಮೂವರು ಆರೋಪಿಗಳನ್ನು ಬೆಳ್ತಂಗಡಿ ನ್ಯಾಯಾಲಯಕ್ಕೆ ಅ.15 ರಂದು ಸಂಜೆ ಬೆಳ್ತಂಗಡಿ ಪೊಲೀಸರು ಹಾಜರುಪಡಿಸಲಿದ್ದಾರೆ.
ಅ.7ರಂದು ಬೆಳ್ತಂಗಡಿ ತಾಲೂಕಿನ ನಾವೂರು ಗ್ರಾಮದ ನಾವೂರು ಪೇಟೆಯಲ್ಲಿರುವ ಸ್ವಾತಿ ಕಟ್ಟಡದಲ್ಲಿ ಕಾರ್ಯಚರಿಸುತ್ತಿರುವ ಡಾ| ಪ್ರದೀಪ್ ಅವರ ಆರೋಗ್ಯ ಕ್ಲಿನಿಕ್ಗೆ ತಡ ರಾತ್ರಿ ಡಿಸೇಲ್ ಸುರಿದು ಬೆಂಕಿ ಹಚ್ಚಿದ ಘಟನೆ ಬೆಳ್ತಂಗಡಿ ತಾಲೂಕನ್ನು ಬೆಚ್ಚಿಬೀಳಿಸಿತ್ತು. ಯಾರೋ ಕಿಡಿಗೇಡಿಗಳು ದಹನಶೀಲ ದ್ರವ್ಯವನ್ನು ಉಪಯೋಗಿಸಿ ನಾವೂರಿನ ಡಾ.ಪ್ರದೀಪ ಎಂಬವರ ಆರೋಗ್ಯ ಕ್ಲಿನಿಕ್ನಲ್ಲಿ ಕೃತ್ಯ ನಡೆಸಿ ಸುಮಾರು 2-3ಲಕ್ಷ ರೂ ನಷ್ಟ ಉಂಟಾಗಿದೆ. ಔಷಧಿಗಳು, ವೈದ್ಯಕೀಯ ಸಲಕರಣೆಗಳು ಸಂಪೂರ್ಣ ಸುಟ್ಟು ಹೋಗಿತ್ತು. ಈ ಬಗ್ಗೆ ಕಲಂ 326(f),326(g),324(5) BNS -2023 ರಂತೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.


