ಬೆಳ್ತಂಗಡಿ: ಬೆಳಾಲು ಗ್ರಾಮದ ದಡಂತಮಲೆ ದೊಂಪದಪಲ್ಕೆ ಎಂಬಲ್ಲಿ ಹಣವನ್ನು ಪಣವಾಗಿಟ್ಟು ಕೋಳಿ ಅಂಕ ಜೂಜಾಟ ನಡೆಸುತ್ತಿದ್ದ ಸ್ಥಳಕ್ಕೆ ಧರ್ಮಸ್ಥಳ ಪೊಲೀಸರು ದಾಳಿ ನಡೆಸಿ ಮೂವರನ್ನು ವಶಕ್ಕೆ ಪಡೆದ ಘಟನೆ ಸೆ.13ರಂದು 12:30 ರ ಸುಮಾರಿಗೆ ನಡೆದಿದೆ.
ಭಾತ್ಮಿದಾರರಿಂದ ಬಂದ ಖಚಿತ ಮಾಹಿತಿಯ ಮೇರೆಗೆ ಧರ್ಮಸ್ಥಳ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಸಮರ್ಥ್ ಆರ್ ಗಾಣಿಗೇರ ನೇತೃತ್ವದ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ತೆರಳಿ ದಾಳಿ ನಡೆಸಿದ್ದಾರೆ. ಈ ವೇಳೆ ಆರೋಪಿಗಳು ಕೋಳಿಗಳ ಕಾಲುಗಳಿಗೆ ಸಣ್ಣ ಕತ್ತಿಗಳನ್ನು ಕಟ್ಟಿ, ಅವುಗಳನ್ನು ಪರಸ್ಪರ ಕಾದಾಟಕ್ಕೆ ಬಿಟ್ಟು ಹಣವನ್ನು ಪಣವಾಗಿಟ್ಟು ಕೋಳಿ ಅಂಕ ಜೂಜಾಟ ನಡೆಸುತ್ತಿದ್ದರು ಎನ್ನಲಾಗಿದೆ.
ಪೊಲೀಸರು ದಾಳಿ ನಡೆಸುತ್ತಿದ್ದಂತೆ ಕೆಲವರು ಸ್ಥಳದಿಂದ ಪರಾರಿಯಾಗಿದ್ದಾರೆ. ಪರಾರಿಯಾದವರಲ್ಲಿ ಯಶೋಧರ ಬೆಳಾಲು ಎಂಬಾತ ಕೋಳಿಗಳ ಕಾಲಿಗೆ ಕಟ್ಟಲಾಗಿದ್ದ ಸಣ್ಣ ಕತ್ತಿಗಳನ್ನು ತೆಗೆದುಕೊಂಡು ಓಡಿಹೋಗಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಸ್ಥಳದಲ್ಲಿದ್ದ ಕೊಯ್ಯೂರು ಗ್ರಾಮದ ಬೀಜದಡಿ ನಿವಾಸಿ ಬೂಚ ಗೌಡ ಮಗ ಬಾಬಿ ಗೌಡ (64), ಬೆಳಾಲು ಗ್ರಾಮದ ಮಾಯ ದರ್ಖಾಸು ನಿವಾಸಿ ಅಣ್ಣಿ ಭಂಡಾರಿ ಮಗ ರಮೇಶ ಭಂಡಾರಿ (36) ಹಾಗೂ ಕೊಯ್ಯೂರು ಗ್ರಾಮದ ಅಕೋಟದಡಿ ನಿವಾಸಿ ವಿಠಲ ಮಗ ಕೃಷ್ಣಪ್ಪ (35) ಎಂಬ ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸ್ಥಳದಿಂದ ಜೂಜಾಟಕ್ಕೆ ಬಳಸಲಾಗಿದ್ದ 21,250 ನಗದು ಹಾಗೂ ವಿವಿಧ ಜಾತಿಯ ಮೂರು ಕೋಳಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಸ್ವಾಧೀನಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ ಸುಮಾರು 22,050 ಎಂದು ಅಂದಾಜಿಸಲಾಗಿದೆ.
ಈ ಕುರಿತು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ BNS ಕಲಂ 112, ಕರ್ನಾಟಕ ಪೊಲೀಸ್ ಕಾಯ್ದೆ ಕಲಂ 87 ಹಾಗೂ Prevention of Cruelty to Animals Act, 1960ರ ಕಲಂ 11(1) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ.


