ಬೆಳ್ತಂಗಡಿ : ಅನಧಿಕೃತ ಅಕ್ರಮ ಕಟ್ಟಡಗಳನ್ನು ನಿರ್ಮಾಣ ಮಾಡುತ್ತಿರುವ ಅಭ್ಯಾಸ್ ಪ್ರೀ ಯೂನಿವರ್ಸಿಟಿ ಕಾಲೇಜ್, ವಿದ್ವತ್ ಪಿಯು ಕಾಲೇಜ್, ಬ್ರೈಟ್ ಹಾರಿಜಾನ್ ಇಂಟರ್ ನ್ಯಾಷನಲ್ ಸ್ಕೂಲ್/ಬೆಸ್ಟ್ ವಸತಿ ಶಾಲೆ, ಶೆಣೈ ರೆಸ್ಟೋರೆಂಟ್ ಸೇರಿದಂತೆ ಹಲವು ಕಟ್ಟಡಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಿಗೆ ದೂರು ಅರ್ಜಿಯನ್ನು ಸಲ್ಲಿಸಲಾಗಿದೆ.

ಬೆಳ್ತಂಗಡಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಇತ್ತೀಚಿನ ದಿನಗಳಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ತಲೆ ಎತ್ತುತ್ತಿದೆ. ಶಿಕ್ಷಣದ ನೆಪದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ಸ್ಥಳೀಯಾಡಳಿತದ ಮತ್ತು ಸಂಬಂಧಪಟ್ಟ ಇಲಾಖೆಗಳ ಯಾವುದೇ ಪರವಾನಿಗೆ ಪಡೆಯದೇ ಅನಧಿಕೃತ ಅಕ್ರಮವಾಗಿ ಬಹುಮಹಡಿ ಕಟ್ಟಡಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಈಗಾಗಲೇ ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದ ಶಕ್ತಿನಗರದ ಬಳಿಯ ವಿದ್ವತ್ ಪಿಯು ಕಾಲೇಜ್, ಲಾಯಿಲ ಗ್ರಾಮದ ಕಾಶಿಬೆಟ್ಟು ಎಂಬಲ್ಲಿ ಅಭ್ಯಾಸ್ ಪ್ರೀ ಯೂನಿವರ್ಸಿಟಿ ಕಾಲೇಜ್, ವೇಣೂರು ಗ್ರಾಮದ ಕರಿಮಣೇಲು ಎಂಬಲ್ಲಿ ಬ್ರೈಟ್ ಹಾರಿಜಾನ್ ಇಂಟರ್ ನ್ಯಾಷನಲ್ ಸ್ಕೂಲ್/ ಬೆಸ್ಟ್ ವಸತಿ ಶಾಲೆ ಶಿಕ್ಷಣ ಸಂಸ್ಥೆಗಳು ಜಮೀನಿನ 9/11 ಮಾಡದೇ ಸ್ಥಳೀಯ ಗ್ರಾಮ ಪಂಚಾಯತ್ ಸಂಬಂಧಪಟ್ಟ ಇಲಾಖೆಗಳ ಯಾವುದೇ ಅನುಮತಿ ಪಡೆಯದೇ ಅಕ್ರಮವಾಗಿ ಅನಧಿಕೃತವಾಗಿ ಬಹುಮಹಡಿ ಕಟ್ಟಡಗಳನ್ನು ನಿರ್ಮಾಣ ಮಾಡಿದೆ. ಇದಲ್ಲದೆ ಕುವೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಅಕ್ರಮವಾಗಿ ಶೆಣೈ ರೆಸ್ಟೋರೆಂಟ್ ಸೇರಿ 4-5 ವಾಣಿಜ್ಯ ಕಟ್ಟಡಗಳ ಕಾಮಗಾರಿಯನ್ನು ನಡೆಸಲಾಗುತ್ತಿದೆ.

ಈ ಬಗ್ಗೆ ಸ್ಥಳೀಯಾಡಳಿತಕ್ಕೆ ದೂರು ನೀಡಿದರೂ ಈ ಶಿಕ್ಷಣ ಸಂಸ್ಥೆಗಳ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲು ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ. ಈ ಕಾಲೇಜ್ ಗಳು ರಾತ್ರಿ ಸಮಯದಲ್ಲಿ ಸರಕಾರಿ ರಜಾ ದಿನಗಳಲ್ಲಿ ಕಾಮಗಾರಿ ಕೆಲಸಗಳನ್ನು ಮುಂದುವರಿಸುತ್ತಿದೆ. ಈ ಅಕ್ರಮ ಕಟ್ಟಡಗಳ ಬಗ್ಗೆ ಸ್ಥಳೀಯ ಗ್ರಾಮ ಪಂಚಾಯತ್ ಆಡಳಿತಕ್ಕೆ ಗೊತ್ತಿದ್ದರೂ ಕೂಡ ಯಾವುದೇ ಕಾನೂನು ಕ್ರಮ ಕೈಗೊಳ್ಳದೇ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ದೂರು ಅರ್ಜಿಯಲ್ಲಿ ತಿಳಿಸಲಾಗಿದೆ.ಈ ಅನಧಿಕೃತ ಅಕ್ರಮ ಕಟ್ಟಡಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ಗೆ ಜ.25 ರಂದು ಬೆಳ್ತಂಗಡಿ ಪ್ರವಾಸದ ವೇಳೆ ದೂರು ಅರ್ಜಿ ಸಲ್ಲಿಸಲಾಗಿದೆ.

ಈ ಎಲ್ಲಾ ಅಕ್ರಮ ಕಟ್ಟಡ ಕಾಮಗಾರಿ ವಿರುದ್ಧ ದೂರು ನೀಡಿದ ಬಗ್ಗೆ ಮೊಟ್ಟಮೊದಲು ಬೆಳ್ತಂಗಡಿ ತಾಲೂಕಿನ ಏಕೈಕ ಮಾಧ್ಯಮ ಮಹಾಎಕ್ಸ್ ಪ್ರೆಸ್ ವೆಬ್ ಸೈಟ್ ಮಾತ್ರ ಪ್ರಭಾವಿಗಳ ಬೆದರಿಕೆಗೆ ಜಗ್ಗದೆ ನೇರ,ಸತ್ಯ ವರದಿಯನ್ನು ಬಿತ್ತರಿಸಿ ಅಧಿಕಾರಿಗಳನ್ನು ನಿದ್ದೆಯಿಂದ ಎಚ್ಚರಿಸಿ ಟೇಪ್, ಎಚ್ಚರಿಕೆ ಬ್ಯಾನರ್ ಹಾಕುವಂತೆ ಮಾಡಿಸಿತ್ತು. ಆದ್ರೂ ಕದ್ದುಮುಚ್ಚಿ ರಾತ್ರಿ ಸಮಯದಲ್ಲಿ ಕಾನೂನನ್ನು ಗಾಳಿಗೆ ತೂರಿ ಕೆಲಸ ಮಾಡುತ್ತಿದ್ದಾರೆ. ಇದೀಗ ಉಸ್ತುವಾರಿ ಸಚಿವರು ಅನಧಿಕೃತ ಅಕ್ರಮ ಕಟ್ಟಡಗಳ ವಿರುದ್ಧ ಯಾವ ರೀತಿಯ ಕ್ರಮ ಕೈಗೊಳ್ಳುತ್ತಾರೆಂದು ಕಾದು ನೋಡಬೇಕಾಗಿದೆ.



