ಬಂಟ್ವಾಳ: ಹಳೆಯ ವಿಚಾರವೊಂದನ್ನು ನೆಪವಾಗಿಟ್ಟುಕೊಂಡು ಮನೆಯೊಳಗೆ ಗುಂಪು ಕಟ್ಟಿಕೊಂಡು ಬಂದ ತಂಡ ಮಹಿಳೆಯ ಮೇಲೆ ಹಲ್ಲೆ ನಡೆಸಿ ಮನೆಮಂದಿಗೆ ಕೊಲೆ ಬೆದರಿಕೆ ಒಡ್ಡಿದ ಘಟನೆ ಬಂಟ್ವಾಳ ಗ್ರಾಮಾಂತರ ಠಾಣಾ ವ್ಯಾಪ್ತಿಯ ನಾವೂರು ಗ್ರಾಮದ ಕೋಂಪೆ ಎಂಬಲ್ಲಿ ನಡೆದಿದ್ದು, ಹಲ್ಲೆಯೊಳಗಾದ ಮಹಿಳೆ ಆರೋಪಿಗಳ ವಿರುದ್ಧ ದೂರು ನೀಡಿದ್ದಾರೆ.
ನಾವೂರು ಗ್ರಾಮದ ನೇತ್ರಾವತಿ ಹೊಳೆ ಬದಿಯ ಕೋಂಪೆ ಚೆನ್ನಪ್ಪ ಪೂಜಾರಿಯ ಪತ್ನಿ ಹೇಮಾವತಿ ಎಂಬವರ ಮೇಲೆ ಹಲ್ಲೆ ನಡೆಸಲಾಗಿದೆ.
ಹಲ್ಲೆ ನಡೆಸಿದ ಆರೋಪಿಗಳನ್ನು ನಾವೂರು ಆಸ್ಪತ್ರೆ ಬಳಿಯ ಅಭಿರಾಜ್(22), ಕಿರಣ್(23) ವಿಶ್ವನಾಥ (56), ಅವಿನಾಶ್(21) ಎಂದು ಗುರುತಿಸಲಾಗಿದೆ.
ನಿನ್ನೆ ರಾತ್ರಿ ಆರೋಪಿ ಅಭಿರಾಜ್ ಚೆನ್ನಪ್ಪ ಪೂಜಾರಿಯವರಲ್ಲಿ ಕಾಲು ಕೆರದು ಜಗಳ ಹಚ್ಚಿಕೊಂಡಿದ್ದು, ರಾತ್ರಿ ಯಾಕೆ ಎಲ್ಲರಿಗೂ ತೊಂದರೆ ಕೊಡುತ್ತೀರಿ ಎಂದು ಪ್ರಶ್ನಿಸಿದ ಹೇಮಾವತಿಯವರನ್ನು ಅವಾಚ್ಯವಾಗಿ ನಿಂದಿಸಿದ ತಂಡ, ಮನೆಯೊಳಗೆ ಬಂದು ತಂಡದಲ್ಲಿದ್ದ ಕಿರಣ್ ಮುಖದ ಮೇಲೆ ಹೊಡೆದು ಹಲ್ಲೆ ನಡೆಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ.