
ವಿಟ್ಲ: ಪಟಾಕಿ ಅಂಗಡಿ ಬಳಿ ನಿಂತಿದ್ದ ವ್ಯಕ್ತಿ ಹಾಗೂ ಅವರ ಸಂಬಂಧಿಕರ ಮೇಲೆ ಬೊಲೇರೋ ಜೀಪ್ ಹಾಯಿಸಿ ಕೊಲೆಗೆ ಯತ್ನಿಸಿದ ಆರೋಪದ ಮೇಲೆ ಜಗದೀಶ್ ಜೈನ್ ಎಂಬಾತನನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ.
ಘಟನೆಯ ವಿವರ: ಮಾಣಿ ನಿವಾಸಿ ವಿಕೇಶ್ .ಕೆ (32) ಎಂಬವರು ನೀಡಿದ ದೂರಿನಂತೆ, ನವೆಂಬರ್ 9ರಂದು ಸಂಜೆ ಅವರು ಬಂಟ್ವಾಳ ತಾಲೂಕಿನ ಮಾಣಿ ಜಂಕ್ಷನ್ನಲ್ಲಿರುವ ಮೈದಾನದ ಪಟಾಕಿ ಅಂಗಡಿಯ ಬಳಿ ನಿಂತಿದ್ದರು. ಈ ವೇಳೆ ಅವರಿಗೆ ಪರಿಚಯವಿರುವ ಆರೋಪಿ ಜಗದೀಶ್ ಜೈನ್ ಎಂಬಾತ ಬೊಲೇರೋ ವಾಹನವನ್ನು ಅತಿವೇಗ ಹಾಗೂ ನಿರ್ಲಕ್ಷ್ಯದಿಂದ ವಿಕೇಶ್ ಅವರ ಕಡೆಗೆ ಚಲಾಯಿಸಿಕೊಂಡು ಬಂದು ಡಿಕ್ಕಿ ಹೊಡೆಯಲು ಯತ್ನಿಸಿದ್ದಾನೆ.
ತಕ್ಷಣವೇ ವಿಕೇಶ್ ಅವರು ಬೊಲೇರೋ ಜೀಪಿನ ಬಾನೆಟ್ ಮೇಲೆ ಹಾರಿ, ಪಕ್ಕದಲ್ಲಿದ್ದ ಮಣ್ಣಿನ ರಾಶಿಯ ಮೇಲೆ ಬಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ವೇಳೆ ಅವರ ಎಡಕಾಲಿನ ಮೊಣಗಂಟಿಗೆ ಗಾಯವಾಗಿದೆ. ಇದೇ ವೇಳೆ ಸ್ಥಳದಲ್ಲಿದ್ದ ವಿಕೇಶ್ ಅವರ ಸಂಬಂಧಿ ತೀರ್ಥಪ್ರಸಾದ್ ಅವರ ಮೇಲೆಯೂ ಆರೋಪಿ ಜೀಪು ಹಾಯಿಸಲು ಯತ್ನಿಸಿದ್ದು, ಅವರೂ ಸಹ ಕೂದಲೆಳೆಯ ಅಂತರದಲ್ಲಿ ತಪ್ಪಿಸಿಕೊಂಡಿದ್ದಾರೆ.ಘಟನಾ ಸ್ಥಳಕ್ಕೆ ಸಾರ್ವಜನಿಕರು ಓಡಿ ಬರುವುದನ್ನು ಕಂಡ ಆರೋಪಿ ಜಗದೀಶ್ ಜೈನ್, ದೂರುದಾರರಿಗೆ ಅವಾಚ್ಯ ಶಬ್ದಗಳಿಂದ ಬೈದು, ಮುಂದಿನ ದಿನಗಳಲ್ಲಿ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿ ಪರಾರಿಯಾಗಿದ್ದ.
ಈ ಕುರಿತು ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ (ಅ.ಕ್ರ: 232/2026, ಕಲಂ: 109, 118(1), 352, 351(2) BNS 2023) ದಾಖಲಿಸಿಕೊಂಡ ಪೊಲೀಸರು, ಆರೋಪಿ ಜಗದೀಶ್ ಜೈನ್ ನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದೆ.


