ಪುತ್ತೂರಿನಲ್ಲಿ ಅಯ್ಯಪ್ಪಸ್ವಾಮಿಯ ಪವಾಡವೊಂದು ನಡೆದಿದೆ. ಹುಟ್ಟಿದಾಗಿನಿಂದ ಮಾತು ಬಾರದ ಬಾಲಕನೊಬ್ಬ ಅಯ್ಯಪ್ಪ ಮಾಲೆ ಧರಿಸಿದ ಬಳಿಕ ಮಾತನಾಡಲು ಆರಂಭಿಸಿರುವ ಅಚ್ಚರಿಯ ಘಟನೆ ನಡೆದಿದೆ.
ಪುತ್ತೂರಿನ ಸಾಮೆತ್ತಡ್ಕ ನಿವಾಸಿ ಪ್ರಸನ್ನನಿಗೆ ಆರಂಭದಿಂದಲೂ ಮಾತು ಬರುತ್ತಿರಲಿಲ್ಲ. ಬಾಲಕ ಕಳೆದ ವರ್ಷ ಅಯ್ಯಪ್ಪ ಮಾಲೆ ಹಾಕಿ, ನಲವತ್ತೆಂಟು ದಿನಗಳ ಕಾಲ ಕಠಿಣ ವೃತಾಚರಣೆ ನಡೆಸಿ ಶಬರಿಮಲೆ ಮೆಟ್ಟಿಲೇರಿದ್ದ. ಸುಮಾರು 48 ಮೈಲು ದುರ್ಗಮ ಕಾಡಿನ ಹಾದಿಯಲ್ಲಿ ಸಾಗಿ ಸ್ವಾಮಿ ದರ್ಶನವನ್ನು ಪಡೆದಿದ್ದ . ಈ ಬಾಲಕ ಇದೀಗ ಅಯ್ಯಪ್ಪ ಸ್ವಾಮಿ ಪವಾಡದಿಂದ ಮಾತನಾಡಲು ಆರಂಭಿಸಿದ್ದಾನೆ. ಒಂದು ಶಬ್ದ ಮಾತನಾಡಲೂ ಒಂದು ವರ್ಷಗಳ ಹಿಂದೆ ಚಡಪಡಿಸುತ್ತಿದ್ದ ಈ ಬಾಲಕ ಇಂದು ಅಯ್ಯಪ್ಪ ಸ್ವಾಮಿಯ ಶರಣು ಕರೆಯುತ್ತಾನೆ. ಮಾತು ಬಾಯಿಯಿಂದ ಬರುತ್ತಿದ್ದು, ಎಂಟು ಶರಣನ್ನು ಪ್ರಸನ್ನ ಯಾವುದೇ ತೊಂದರೆಯಿಲ್ಲದೆ ಕರೆಯುತ್ತಾನೆ. ಬಳಿಕದ ಶಬ್ದಗಳಲ್ಲಿ ಅಷ್ಟು ಸ್ಪಷ್ಟವಾಗಿಲ್ಲದಿದ್ದರೂ, ಅರ್ಥವಾಗುವಷ್ಟಿದೆ. ಈ ಬಾರಿ ಮತ್ತೆ ಅಯ್ಯಪ್ಪ ಮಾಲೆ ಧರಿಸಿ ಮಲೆ ಏರಲು ಸಿದ್ಧತೆ ನಡೆಸಿದ್ದಾನೆ. ಈ ಬಾರಿ ಮಲೆ ಏರಿದರೆ ಪ್ರಸನ್ನ ಇನ್ನಷ್ಟು ಸ್ಪಷ್ಟವಾಗಿ ಮಾತನಾಡುವ ಸಾಧ್ಯತೆಯಿದೆ ಎನ್ನುವ ನಿರೀಕ್ಷೆಯಲ್ಲಿ ಹಿರಿಯ ಸ್ವಾಮಿಗಳಲ್ಲಿದೆ. ಮೊದಲ ಬಾರಿಗೆ ಮಾಲೆ ಧರಿಸಲು ಬಂದಾಗ ಕೇಳಲು ಮತ್ತು ಮಾತನಾಡಲು ಆಗದ ಸ್ಥಿತಿಯಲ್ಲಿದ್ದ ಪ್ರಸನ್ನನಿಗೆ ಇದೀಗ ಒಂದು ಕಿವಿ ಕೇಳಿಸುತ್ತಿದೆ, ಮಾತನಾಡಲು ಶಬ್ದಗಳು ಹೊರಡುತ್ತಿದೆ. ಅಯ್ಯಪ್ಪ ಸ್ವಾಮಿಯ ಈ ಪವಾಡದಿಂದ ಬಾಲಕ ಮನೆಯವರು ಖುಷಿಯಾಗಿದ್ದಾರೆ.