ಸುಳ್ಯ: ನನ್ನನ್ನು ಕಿಡ್ನ್ಯಾಪ್ ಮಾಡುತ್ತಿದ್ದಾರೆಂದು ಪೊಲೀಸರಿಗೆ ಅನಾಮಿಕ ಕರೆ ಮಾಡಿದ ಹಿನ್ನೆಲೆ ಕಾದು ಕಾದು ಸುಸ್ತಾಗಿ ಪೊಲೀಸರು ಕೊನೆಗೆ ತೆರಳಿದ ಘಟನೆ ಸುಳ್ಯದಲ್ಲಿ ನಡೆದಿದೆ.
ಅನಾಮಿಕ ಪುತ್ತೂರು ಸಮೀಪದ ಕಬಕದಿಂದ ಕಾರಿನಲ್ಲಿ ನನ್ನನ್ನು ಕಿಡ್ನ್ಯಾಪ್ ಮಾಡಿದ್ದಾರೆ, ರಕ್ಷಣೆ ಮಾಡಿ ಎಂದು ಶನಿವಾರ ತಡ ರಾತ್ರಿ 112ಗೆ ಅನಾಮಿಕ ಕರೆ ಮಾಡಿದ್ದಾನೆ. ಹೀಗಾಗಿ ಜಾಲ್ಸೂರು ಹಾಗೂ ಸುಳ್ಯದಲ್ಲಿ ಸುಳ್ಯ ಪೊಲೀಸರು ನಾಕಾ ಬಂದಿ ಹಾಕಿ ಕಾದು ಅಂತಹ ಯಾವುದೇ ಪ್ರಕರಣ ಪತ್ತೆಯಾಗದ ಹಿನ್ನೆಲೆಯಲ್ಲಿ ಮರಳಿದ್ದಾರೆ.
ಕರೆ ಬಂದ ತತ್‌ಕ್ಷಣ 112 ನಿರ್ವಹಣೆ ಕೇಂದ್ರದಿಂದ ಪುತ್ತೂರು ನಗರ ಟೌನ್ ಪೊಲೀಸ್ ಠಾಣೆಗೆ ತಿಳಿಸಿದ್ದು, ಅವರು ಕೂಡಲೇ ವಯರ್ಲೆಸ್ ಮೂಲಕ ಸುಳ್ಯ ಹಾಗೂ ಇತರ ಠಾಣೆಗಳಿಗೆ ಮಾಹಿತಿ ರವಾನಿಸಿದ್ದಾರೆ. ಸುಳ್ಯ ಪೊಲೀಸರು ಸುಳ್ಯ ಹಾಗೂ ಜಾಲ್ಸೂರು ಬಳಿ ನಾಕಾ ಬಂದಿ ಹಾಕಿ ಬಹಳ ಸಮಯ ಕಾದು ಕುಳಿತಿದ್ದಾರೆ. ಯಾವುದೇ ಶಂಕಿತ ವಾಹನ ಬಾರದಿದ್ದಾಗ ಪೊಲೀಸರು ಮರಳಿದ್ದಾರೆ; ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ