ಮಂಗಳೂರು: ಕಾರೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಹಿಂಬದಿ ಸವಾರೆ ಮಹಿಳೆ ರಸ್ತೆಗೆ ಬಿದ್ದು ಸಾವನ್ನಪ್ಪಿದ ಘಟನೆ ರಾ.ಹೆ. 66 ರ ಕಾಪಿಕಾಡು ಎಂಬಲ್ಲಿ ನಡೆದಿದೆ. ಮೃತ ಮಹಿಳೆಯನ್ನು ಎಮಿಲ್ಡಾ ಡಿಸೋಜ (59) ಎಂದು ಗುರುತಿಸಲಾಗಿದೆ.
ಮೊಮ್ಮಗಳ ಹುಟ್ಟುಹಬ್ಬವಿದ್ದು ಅದೇ ಖುಷಿಯಲ್ಲಿ ಇಂದು ಬೆಳ್ಳಂಬೆಳಗ್ಗೆ ತೊಕ್ಕೊಟ್ಟು ಚರ್ಚ್ ಗೆ ತೆರಳಿ ವಿಶೇಷ ಪೂಜೆಯಲ್ಲಿ ಪಾಲ್ಗೊಂಡು ಹಿಂತಿರುಗಿದ್ದರು. ಅರ್ಧ ದಾರಿಯ ವರೆಗೂ ಸಂಬಂಧಿಕರ ಜತೆಗೆ ನಡೆದುಕೊಂಡೇ ಬರುತ್ತಿದ್ದ ಅವರನ್ನ ಪ್ಲೇವಿ ಡಿಸೋಜ ಎಂಬ ಪರಿಚಯಸ್ಥ ಮಹಿಳೆ ತನ್ನ ಆಕ್ಟಿವಾ ಸ್ಕೂಟರಿಗೆ ಹತ್ತಿಸಿದ್ದಾರೆ.
ಸ್ಕೂಟರ್ ಕಾಪಿಕಾಡು ರಾಜ್ ಕೇಟರರ್ಸ್ ಬಳಿ ತಲುಪುತ್ತಿದ್ದಂತೆ ಹಿಂದಿನಿಂದ ಬಂದ ಕಾರೊಂದು ಡಿಕ್ಕಿ ಹೊಡೆದಿದ್ದು ಹಿಂಬದಿ ಸವಾರೆ ಎಮಿಲ್ಡಾ ಅವರು ರಸ್ತೆಗೆಸೆಯಲ್ಪಟ್ಟಿದ್ದಾರೆ. ತಕ್ಷಣ ಅವರನ್ನ ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಸಾವನ್ನಪ್ಪಿದ್ದಾರೆ. ಸ್ಕೂಟರ್ ಸವಾರೆ ಪ್ಲೇವಿ ಡಿ ಸೋಜ(47) ಅವರು ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಹಿಟ್ ಆಂಡ್ ರನ್ ನಡೆಸಿದ ಕಾರಿನ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.