ಪುತ್ತೂರು: ಪುತ್ತೂರು ಬಸ್ ನಿಲ್ದಾಣದಲ್ಲಿ ಅಪರಿಚಿತ ಮಹಿಳೆಯೊಬ್ಬರಿಗೆ ಅಪರಿಚಿತ ವ್ಯಕ್ತಿಯೋರ್ವ ಮದ್ಯವನ್ನು ನೀಡಿ, ಅತ್ಯಾಚಾರ ನಡೆಸಿದ ಘಟನೆ ಸಂಭವಿಸಿದೆ.
ಹಾಸನ ತಾಲೂಕು ಚೆನ್ನರಾಯಪಟ್ಟಣದ ನಿವಾಸಿಯಾಗಿರುವ ಸಂತ್ರಸ್ಥ ಮಹಿಳೆಯು, ದಿನಾಂಕ 24.11.2023 ರಂದು ರಾತ್ರಿ ಸಮಯ, ಪುತ್ತೂರು ಬಸ್ ನಿಲ್ದಾಣದಲ್ಲಿ ಇದ್ದಾಗ, ಅಪರಿಚಿತ ವ್ಯಕ್ತಿಯೋರ್ವ ಸದರಿ ಮಹಿಳೆಗೆ ಮದ್ಯವನ್ನು ಸೇವಿಸಲು ನೀಡಿ, ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರ ನಡೆಸಿರುವ ಘಟಣೆ ನಡೆದಿದೆ.
ಈ ಘಟನೆಗೆ ಸಂಬಂಧಿಸಿದಂತೆ, ಪುತ್ತೂರು ನಗರ ಠಾಣೆಯಲ್ಲಿ ದಿನಾಂಕ: 25-11-2023 ರಂದು ವರದಿಯಾಗಿದ್ದ ಅ.ಕ್ರ 114/2023 ಕಲಂ 376 ಐ.ಪಿ.ಸಿ ಪ್ರಕರಣದ ತನಿಖೆ ನಡೆಸಲಾಗಿ ಪುತ್ತೂರು ಆರ್ಯಾಪು ಗ್ರಾಮದ ನಿವಾಸಿಯಾದ ಆರೋಪಿ ಸಂಶುದ್ದೀನ್ ಆಸ್ಗರ್ ಆಲಿ (23) ( ಹಾಲಿ ವಾಸ: ಬನ್ನೂರು ಗ್ರಾಮ ಪುತ್ತೂರು ) ಎಂಬಾತನನ್ನು ಪುತ್ತೂರು ನಗರ ಠಾಣಾ ಪೊಲೀಸರು ದಿನಾಂಕ 28.11.2023 ರಂದು ಸಂಜೆ ಪುತ್ತೂರು KSRTC ಬಸ್ ನಿಲ್ದಾಣದ ಬಳಿ ವಶಕ್ಕೆ ಪಡೆದಿರುತ್ತಾರೆ. ಆರೋಪಿಯನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು.