Monday, June 8, 2026
Homeಇತರಪುತ್ತೂರು: ಐಟಿ ಉದ್ಯೋಗಕ್ಕೆ ಗುಡ್ ಬೈ ಹೇಳಿ ಸಗಣಿ ಗೊಬ್ಬರ ಮಾರಾಟಕ್ಕೆ ಮುಂದಾದ ಯುವಕ..!

ಪುತ್ತೂರು: ಐಟಿ ಉದ್ಯೋಗಕ್ಕೆ ಗುಡ್ ಬೈ ಹೇಳಿ ಸಗಣಿ ಗೊಬ್ಬರ ಮಾರಾಟಕ್ಕೆ ಮುಂದಾದ ಯುವಕ..!

- Advertisement -
- Advertisement -

ಪುತ್ತೂರು: ರಾಸಾಯನಿಕ ಗೊಬ್ಬರಕ್ಕೆ ಪರ್ಯಾಯವಾಗಿ ಸೆಗಣಿ ಹುಡಿ ಬಳಸಿ ಉತ್ತಮ ಇಳುವರಿ ಪಡೆಯುವ ಮೂಲಕ ಪುತ್ತೂರು ತಾಲೂಕಿನ ಇಂಜಿನಿಯರಿಂಗ್ ಪದವೀಧರ ಕೃಷಿಕರೊಬ್ಬರ ಪ್ರಯೋಗ ಯಶಸ್ವಿಯಾಗಿದೆ.

ಭೂಮಿಯನ್ನು ರಾಸಾಯನಿಕ ಮುಕ್ತವಾಗಿಸುವಲ್ಲಿ ಪರಿಣಾಮಕಾರಿ ಪ್ರಯೋಗಗಳು ಅಲ್ಲಲ್ಲಿ ರೈತರಿಂದಲೇ ನಡೆಯುತ್ತಿದ್ದು, ಪುತ್ತೂರಿನ ಮುಂಡೂರು ಗ್ರಾಮದ ಹಿಂದಾರು ನಿವಾಸಿ ಜಯಗುರು ಆಚಾರ್ ಸೆಗಣಿ ಹುಡಿ ಗೊಬ್ಬರದ ಮೂಲಕ ಸಾವಯವ ಕೃಷಿಗೆ ಹೊಸ ರೂಪ ನೀಡಿದ್ದಾರೆ. ರಾಸಾಯನಿಕ ಗೊಬ್ಬರಕ್ಕೆ ಗುಡ್‌ಬೈ ಹೇಳಿ ಮರಳಿ ಸೆಗಣಿ ಗೊಬ್ಬರಕ್ಕೆ ಮೊರೆಹೋಗಿ ಉತ್ತಮ ಫಲ ಪಡೆಯುವ ಜತೆಗೆ ಭೂಮಿಯ ಫಲವತ್ತತೆಯನ್ನೂ ಹೆಚ್ಚಿಸುತ್ತಿದ್ದಾರೆ.

ಕೃಷಿ ತೋಟಗಳಲ್ಲಿ ಸೆಗಣಿ ಬಳಕೆ ಹೊಸ ಪ್ರಯೋಗವಲ್ಲದಿದ್ದರೂ, ಸೆಗಣಿಯನ್ನು ಸಂಸ್ಕರಿಸಿ, ಸೆಗಣಿಯಿಂದಲೂ ವಿವಿಧ ರೀತಿಯ ಕೃಷಿಗೆ ಉಪಕಾರಿ ವಸ್ತುಗಳನ್ನು ಪಡೆಯಬಹುದು ಎನ್ನುವುದನ್ನು ಪುತ್ತೂರಿನ ಈ ಯುವ ಕೃಷಿಕ ತೋರಿಸಿಕೊಟ್ಟಿದ್ದಾರೆ. ಕೃಷಿ ತೋಟಗಳಲ್ಲಿ ರಾಸಾಯನಿಕ ಗೊಬ್ಬರ ಯಾವಾಗ ಬಳಕೆ ಆರಂಭಗೊಂಡಿತೊ ಅಂದಿನಿಂದ ಭೂಮಿಯ ಫಲವತ್ತತೆ ನಾಶಗೊಂಡಿತು. ಈಗ ಮತ್ತೆ ಸಗಣಿ ಬಳಸುವ ಮೂಲಕ ಸಾವಯವ ಕೃಷಿಯ ಮಹತ್ವ ಮುನ್ನೆಲೆಗೆ ತರಬೇಕು ಎನ್ನುವುದು ಜಯಗುರು ಆಚಾರ್ ನ ಮುಖ್ಯ ಉದ್ದೇಶವೂ ಆಗಿದೆ.

ಇಂಜಿನಿಯರಿಂಗ್ ಪದವೀಧರ ಜಯಗುರು ಆಚಾರ್ ಕಂಪೆನಿಯೊಂದರಲ್ಲಿ ಉದ್ಯೋಗ ದಲ್ಲಿದ್ದರು. 2019ರಲ್ಲಿ ವೃತ್ತಿಗೆ ವಿದಾಯ ಹೇಳಿ ತನ್ನ ತಂದೆ ನಡೆಸುತ್ತಿದ್ದ ಹೈನುಗಾರಿಕೆಗೆ ಸಾಥ್ ನೀಡಲು ಆರಂಭಿಸಿದರು. ತನ್ನ ಕೃಷಿ ಭೂಮಿಯನ್ನು ರಾಸಾಯನಿಕ ಮುಕ್ತ ಮಾಡಬೇಕು ಎಂಬ ಕನಸು ಹೊತ್ತು ಈಗ ಸಾವಯವ ಕೃಷಿಯತ್ತ ಒಲವು ತೋರಿದ್ದಾರೆ. ಅದಕ್ಕಾಗಿ ಸೆಗಣಿ ಗೊಬ್ಬರದ ಹಲವು ಪ್ರಯೋಗಕ್ಕೆ ಮುಂದಾಗಿದ್ದಾರೆ. ಸೆಗಣಿ ಹುಡಿ, ಸ್ಥರಿ ತಯಾರಿಸಿ ಅಗತ್ಯ ಇರುವವರಿಗೆ ಮಾರಾಟ ಮಾಡುತ್ತಿದ್ದಾರೆ. ಮುಂದಕ್ಕೆ ದ್ರವ ರೂಪಿ ಗೊಬ್ಬರ ತಯಾರಿಸುವ ಪ್ರಯೋಗ ಆರಂಭಿಸಿದ್ದಾರೆ. ಆ ಮೂಲಕ ಗೋ ಆಧಾರಿತ ಕೃಷಿ ಕ್ರಾಂತಿಗೆ ಮುಂದಡಿಯಿಟ್ಟಿದ್ದಾರೆ.

- Advertisement -

Latest News

error: Content is protected !!