ಮಂಗಳೂರು: ಉಗ್ರರಿಗೆ ತರಬೇತಿ ನೀಡುವ ಕೇಂದ್ರಗಳ ಹಾಗೆಯೇ ಕಳ್ಳರಿಗೂ ತರಬೇತಿ ನೀಡುವ ಕೇಂದ್ರಗಳಿವೆ. ಇಲ್ಲಿ ಮಕ್ಕಳಿಗೆ ಸಣ್ಣಂದಿನಿಂದಲೇ ತಸ್ಕರ ವಿದ್ಯೆಯ ತರಬೇತಿ ಆರಂಭವಾಗುತ್ತದೆ. ಇಂತಹ ಕೇಂದ್ರಗಳಲ್ಲಿ ತರಬೇತಿ ಪಡೆಯುತ್ತಿರುವ ಕಳ್ಳರ ತಂಡವೇ ‘ಚಡ್ಡಿ ಗ್ಯಾಂಗ್’.
ಮಂಗಳೂರಿನ 2 ಕಡೆ ಮನೆ ದರೋಡೆ ನಡೆಸಿ ಕಳೆದ ಜುಲೈ ತಿಂಗಳಿನಲ್ಲಿ ಸಿಕ್ಕಿಬಿದ್ದಿದ್ದ ಈ ಗ್ಯಾಂಗ್‌ನ ಸದಸ್ಯರ ತನಿಖೆ, ವಿಚಾರಣೆಯನ್ನು ಮಂಗಳೂರಿನ ಪೊಲೀಸರು ಕೈಗೊಂಡಿದ್ದು, ಈ ವಿಚಾರಣಾ ಸಂದರ್ಭದಲ್ಲಿ “ಚಡ್ಡಿಗ್ಯಾಂಗ್”ನ ಬಂಧಿತ ಸದಸ್ಯರಿಂದ ಈ ವಿಷಯ ತಿಳಿದುಬಂದಿದೆ.
‘ಚಡ್ಡಿಗ್ಯಾಂಗ್’ನ ದೋಷಾರೋಪ ಪಟ್ಟಿ ಸಲ್ಲಿಕೆ ಅಂತಿಮ ಹಂತಕ್ಕೆ ಬಂದಿದೆ. ಇನ್ನು ತನಿಖೆ ವೇಳೆ ಇವರ ಕಾರ್ಯಾಚರಣೆ ಹೇಗಿರುತ್ತದೆ, ಮಕ್ಕಳಿಗೆ ಹೇಗೆ ತರಬೇತಿ ನೀಡಲಾಗುತ್ತದೆ, ಕಳವು, ದರೋಡೆಯಲ್ಲಿ ಮಹಿಳೆಯರೂ ಕೈಚಳಕ ತೋರಿಸುತ್ತಾರೆಯೇ ಎಂಬ ಪ್ರಶ್ನೆಗಳಿಗೆ ಉತ್ತರ ಲಭಿಸಿದೆ.
ಕಳ್ಳತನಕ್ಕೆ ತರಬೇತಿ ಹೇಗಿರುತ್ತದೆ?; ಕಳ್ಳತನಕ್ಕೆ ಇಲ್ಲಿ ಮಕ್ಕಳಿರುವಾಗಲೇ ಕಳ್ಳತನಕ್ಕೆ ಅಣಿ ಮಾಡಲಾಗುತ್ತಿದ್ದು, ಕಳ್ಳತನವನ್ನೇ “ವೃತ್ತಿ”ಯಾಗಿ ಸ್ವೀಕರಿಸುವಂತೆ ಅವರ ತಲೆಗೆ ತುಂಬಲಾಗುತ್ತದೆ. ಕಠಿಣ ರೀತಿಯ ತರಬೇತಿಯನ್ನು ಅವರಿಗೆ ನೀಡಲಾಗುತ್ತದೆ, ಅಷ್ಟೇ ಅಲ್ಲದೇ ಚಿಕ್ಕಮಕ್ಕಳಿಗೆ ಹೊಡೆದು ಬಡಿದು ದೇಹ ಮತ್ತು ಮನಸ್ಸನ್ನು ಒರಟು ಗೊಳಿಸುತ್ತಾರೆ. ಮಕ್ಕಳನ್ನು 10 ವರ್ಷದವರಿರುವಾಗಲೇ ತಮ್ಮೊಂದಿಗೆ ಕೃತ್ಯ ನಡೆಸಲು ಕರೆತರುತ್ತಾರೆ. ಆ ಮೂಲಕ ಅವರಿಗೆ ಚಿಕ್ಕಂದಿನಲ್ಲೇ ತರಬೇತಿ ಸಿಗುತ್ತದೆ. ತಂಡದಲ್ಲಿ ಮಹಿಳೆಯರೂ ಇರುತ್ತಾರೆ. 2023ರ ಡಿಸೆಂಬರ್‌ನಲ್ಲಿ ನಡೆದಿದ್ದ ಒಂದು ಮನೆ ಕಳವಿನಲ್ಲಿ 7 ಪುರುಷರು, 4 ಮಹಿಳೆಯರಿದ್ದರು, ಅವರಲ್ಲೊಬ್ಟಾಕೆ 8 ತಿಂಗಳ ಗರ್ಭಿಣಿಯಾಗಿದ್ದಳು ಎನ್ನುವ ಮಾಹಿತಿ ಪೊಲೀಸರಿಗೆ ಸಿಕ್ಕಿತ್ತು. ಇವರ ಬಳಿ ಇದೆ ಹೈಡ್ರಾಲಿಕ್ ಕಟ್ಟರ್ ಕಳವಿಗಾಗಿ ಅತ್ಯಾಧುನಿಕ ಹಾಗೂ ಪ್ರಬಲವಾದ ಹೈಡ್ರಾಲಿಕ್ ಕಟ್ಟರ್‌ಗಳನ್ನು ಬಳಸುತ್ತಾರೆ. ಎಲ್ಲ ಸಲಕರಣೆಗಳನ್ನೂ ಬಟ್ಟೆಯಲ್ಲಿ ಸೊಂಟಕ್ಕೆ ಕಟ್ಟಿಕೊಳ್ಳುತ್ತಾರೆ, ಬೆನ್ನಿಗೆ ಬ್ಯಾಗ್ ಇರುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.