ಬಂಟ್ವಾಳ: ಸಂಬಂಧಿಕನೊಬ್ಬ ತನ್ನ ಮನೆಯಲ್ಲಿ ಆಶ್ರಯ ಪಡೆದಿದ್ದ ಯುವತಿಗೆ ಲೈಂಗಿಕ ಕಿರುಕುಳ ನೀಡಿರುವ ಘಟನೆ ಬಂಟ್ವಾಳದ ಅಲ್ಲಿಪಾದೆಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.ಸಂತ್ರಸ್ತ ಯುವತಿ ಹಾಗೂ ಆಕೆಯ ತಮ್ಮನನ್ನು ಆ.19ರಂದು ಪುನರ್‌ವಸತಿ ಕೇಂದ್ರಕ್ಕೆ ದಾಖಲಿಸಲಾಗಿದೆ.
ಯುವತಿ ಹಾಗೂ ಆಕೆಯ ತಮ್ಮ ಅಜ್ಜಿಯ ಜತೆ ವಾಸವಿದ್ದು, ಅಜ್ಜಿಯ ನಿಧನದ ಬಳಿಕ ಸಂಬಂಧಿಯ ಮನೆಯಲ್ಲಿ ವಾಸವಿದ್ದರು. ಈ ವೇಳೆ ಯುವತಿಯ ಸಂಬಂಧಿ ಯುವತಿಗೆ ನಿರಂತರವಾಗಿ ಲೈಂಗಿಕ ಕಿರುಕುಳ ನೀಡುತ್ತಿದ್ದಾನೆ. ಆದರೆ ಆಕೆಯ ಆರೋಗ್ಯದಲ್ಲಿ ಕೊಂಚ ನ್ಯೂನ್ಯತೆ ಇದ್ದ ಹಿನ್ನೆಲೆಯಲ್ಲಿ ಈ ವಿಚಾರವನ್ನು ತಿಳಿಸುವುದಕ್ಕೆ ಸಾಧ್ಯವಾಗಿರಲಿಲ್ಲ. ಬಳಿಕ ಅಧಿಕಾರಿಗಳ ವಿಚಾರಣೆಯಿಂದ ಈ ಎಲ್ಲಾ ವಿಚಾರಗಳು ತಿಳಿದುಬಂದಿದೆ.
ಘಟನೆಯ ಕುರಿತು ಮಾಹಿತಿ ತಿಳಿದ ಸರಪಾಡಿ ಗ್ರಾ.ಪಂ. ಕಾವಲು ಸಮಿತಿಯವರು ಹಾಗೂ ಬಂಟ್ವಾಳ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯವರು ಇಬ್ಬರ ರಕ್ಷಣ ಕಾರ್ಯವನ್ನು ನಿರ್ವಹಿಸಿದ್ದಾರೆ. ಬಂಟ್ವಾಳ ಸಿಡಿಪಿಒ ಗಾಯತ್ರಿ ಬಾಯಿ ಎಚ್. ಅವರ ಮಾರ್ಗದರ್ಶನದಲ್ಲಿ ಮೇಲ್ವಿಚಾರಕಿ ಶೋಭಾ ಅವರು ಸಂತ್ರಸ್ತ ಯುವತಿಯನ್ನು ಮಂಗಳೂರು ಜಪ್ಪಿನಮೊಗರಿನ ಸ್ವಾಧರ ಕೇಂದ್ರ ಹಾಗೂ ಆಕೆಯ ತಮ್ಮ ಬಾಲಕನನ್ನು ಬೋಂದೆಲ್‌ನ ಬಾಲಕರ ಬಾಲಮಂದಿರಕ್ಕೆ ಸೇರಿಸಲಾಗಿದೆ ಎಂದು ಸಿಡಿಪಿಒ ಕಚೇರಿ ಮಾಹಿತಿ ನೀಡಿದೆ.