ಮಂಗಳೂರು : ಬ್ಯಾಂಕ್ ನಿಂದ ಸಾಲ ಪಡೆಯಲು ನಕಲಿ ದಾಖಲೆಗಳನ್ನು ಸಲ್ಲಿಸಿ 36 ಲಕ್ಷ ಸಾಲ ಪಡೆದು ವಂಚನೆ ಮಾಡಿದ ಸಂಬಂಧ ಬ್ಯಾಂಕ್ ಮ್ಯಾನೇಜರ್ ನೀಡಿದ ದೂರಿನಂತೆ ಹಲವು ಪ್ರಕರಣದ ಆರೋಪಿ ಸೇರಿ ಮೂವರು ಆರೋಪಿಗಳನ್ನು ಮಂಗಳೂರು ಸೆನ್ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.

ಮಂಗಳೂರಿನ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಕರಂಗಲಪಾಡಿ ಶಾಖೆಯಿಂದ ಕಳೆದ ಎರಡು ವರ್ಷದ ಹಿಂದೆ ಬಾಲಕೃಷ್ಣ ಸುವರ್ಣ ಎಂಬಾತ ತನ್ನ ಸ್ನೇಹಿತ ಕಿರಣ್ ಕುಮಾರ್ ಎಂಬಾತನ ಹೆಸರಿನಲ್ಲಿ ನಕಲಿ ದಾಖಲೆಗಳನ್ನು ನೀಡಿ 36 ಲಕ್ಷ ರೂಪಾಯಿ ಲೋನ್ ಪಡೆದಿದ್ದಾನೆ. ಈ ಸಾಲಕ್ಕೆ ಬಾಲಕೃಷ್ಣ ಸುವರ್ಣ ಮತ್ತು ದೀಕ್ಷಿತ್ ರಾಜ್ ಎಂಬವರು ಜಾಮೀನು ಹಾಕಿದ್ದರು. ಆದ್ರೆ ಈ ಸಾಲದ ಮೊತ್ತವನ್ನು ವಾಪಸ್ ಕಟ್ಟದೆ ಸುಮ್ಮನಿದ್ದರು ಈ ವೇಳೆ ಬ್ಯಾಂಕ್ ಅಧಿಕಾರಿಗಳು ದಾಖಲೆಗಳನ್ನು ಕೆಲ ದಿನಗಳ ಹಿಂದೆ ಪರಿಶೀಲನೆ ಮಾಡಿದಾಗ ನಕಲಿ ದಾಖಲೆಗಳೆಂದು ಬೆಳಕಿಗೆ ಬಂದಿದೆ. ನಂತರ ಬ್ಯಾಂಕ್ ಮ್ಯಾನೇಜರ್ ಮಂಗಳೂರು ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಅದರಂತೆ ಪ್ರಕರಣದ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಈ ವಂಚನೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾದ ಮಂಗಳೂರು ಬಜ್ಪೆಯ ಕೊಳಂಬೆ ನಿವಾಸಿ ಕಿರಣ್ ಕುಮಾರ್(41), ಮಂಗಳೂರು ಜಪ್ಪುವಿನ ಕುಡುಪಾಡಿ ನಿವಾಸಿ(ಹಾಲಿ), ಈ ಹಿಂದೆ ಬೆಳ್ತಂಗಡಿ ತಾಲೂಕಿನ ಪುಂಜಾಲಕಟ್ಟೆ ದೇಕಿನಕಟ್ಟೆ ನಿವಾಸಿಯಾಗಿದ್ದ ಬಾಲಕೃಷ್ಣ ಸುವರ್ಣ(38), ಬೆಳ್ತಂಗಡಿ ತಾಲೂಕಿನ ಸೋಣಂದೂರು ಗ್ರಾಮದ ದೀಕ್ಷಿತ್ ರಾಜ್(32) ನನ್ನು ಮಂಗಳೂರು ಸೆನ್ ಪೊಲೀಸರು ಮಂಗಳವಾರ ವಶಕ್ಕೆ ಪಡೆದು ವಿಚಾರಣೆ ನಡೆಸಿ ನಂತರ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಲಯವು ಮೂವರು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಬಾಲಕೃಷ್ಣ ಸುವರ್ಣ @ ಬಾಲಕೃಷ್ಣ ಪೂಜಾರಿಯ ಕ್ರಿಮಿನಲ್ ಹಿನ್ನಲೆ :
ಬಾಲಕೃಷ್ಣ ಸುವರ್ಣನ ಮೇಲೆ ಧರ್ಮಸ್ಥಳದಲ್ಲಿ ಪೆಟ್ರೋಲ್ ಕಳ್ಳತನ , ಆಂಧ್ರಪ್ರದೇಶ ಮುಖ್ಯಮಂತ್ರಿ ಪರಿಹಾರ ನಿಧಿ ಹಗರಣ , ಮಂಗಳೂರಲ್ಲಿ 3 ಬ್ಯಾಂಕ್ ವಂಚನೆ ಕೇಸ್ ಕೂಡ ಈತನ ಮೇಲಿದೆ. ಈತ ಮೂಲತಃ ಬೆಳ್ತಂಗಡಿ ತಾಲೂಕಿನ ಪುಂಜಾಲಕಟ್ಟೆ ದೇಯಿನಕಟ್ಟೆ ನಿವಾಸಿಯಾಗಿದ್ದು ಬಡಕುಟುಂಬದಕ್ಕೆ ಸೇರಿದವ. ಪುಂಜಾಲಕಟ್ಟೆಯಲ್ಲಿ ಆಟೋ ಓಡಿಸಿ ದುಡಿಯುತ್ತಿದ್ದ. ಏಕಾಏಕಿ ಶ್ರೀಮಂತನಾಗಿ 2004-05 ರಲ್ಲಿ ಧರ್ಮಸ್ಥಳದ ನಾರ್ಯ ಬಳಿ ಜಾಗ ತೆಗೆದು ಎರಡು ಅಂತಸ್ತಿನ ಮನೆ ಮಾಡಿಕೊಂಡು ಧರ್ಮಸ್ಥಳದ ಕನ್ಯಾಡಿಯಲ್ಲಿ “ಮಾತೃಶ್ರೀ ಫೈನಾಸ್ಸ್ “ಎಂಬ ಸಂಸ್ಥೆಯನ್ನು ಮಾಡಿಕೊಂಡಿದ್ದ . ತನ್ನ ಪೈನಾಸ್ಸ್ ಗೆ ಪಿಗ್ಮಿ ಖಾತೆಗೆ ಸಾರ್ವಜನಿಕರು ಲಕ್ಷಾಂತರ ಹಣವನ್ನು ಜಮೆ ಮಾಡುತ್ತಿದ್ದರು. ಇದರಿಂದ ಆತನ ಸಂಸ್ಥೆ ಸ್ವಲ್ಪ ಬೆಳೆದಿದೆ. ನಂತರ ವರ್ಷ ಕಳೆದಂತೆ ಉಜಿರೆ ಯಲ್ಲಿ ಎರಡನೇ ಫೈನಾನ್ಸ್ ಶಾಖೆ ತೆರದು ವ್ಯವಹಾರ ಶುರು ಮಾಡಿದ. ನಂತರ ಶ್ರೀಮಂತ ಎಂದು ಹೇಳಿಕೊಂಡು ಒಂದು ಮದುವೆ ಕೂಡ ಮಾಡಿಕೊಂಡ. ಆದ್ರೆ ಕ್ರಮೇಣ ಸಾರ್ವಜನಿಕರ ಲಕ್ಷಾಂತರ ಹಣದ ಜೊತೆಗೆ ಯಾರಿಗೂ ತಿಳಿಸದೆ ಎರಡು ಫೈನಾನ್ಸ್ ಗೂ ಬೀಗಹಾಕಿ ಮಂಗಳೂರಿಗೆ ಪರಾರಿಯಾಗಿದ್ದ. ಅಲ್ಲಿಯೇ ಮನೆಯೊಂದನ್ನು ಮಾಡಿ ಇದ್ದ. ಕೆಲವು ಸಮಯದ ನಂತರ ಧರ್ಮಸ್ಥಳದ ದೊಂಡೊಲೆ ಬಳಿ ಇರುವ ಪೆಟ್ರೋನೆಟ್.ಎಮ್.ಎಚ್.ಬಿ. ಲಿಮಿಟೆಡ್ (PML) ಸಂಸ್ಥೆಯ ಪೈಪ್ ಲೈನ್ ಗೆ ಕನ್ನ ಹಾಕಿ ಪೆಟ್ರೋಲ್ ಕಳ್ಳತನ ವ್ಯವಹಾರ ಮಾಡಿ ಕೊನೆಗೆ ಬೆಳ್ತಂಗಡಿ ಪೊಲೀಸರ ಕೈಗೆ ಟ್ಯಾಂಕರ್ ಸಮೇತ ರೆಡ್ ಹ್ಯಾಂಡ್ ಸಿಕ್ಕಿಬಿದ್ದು ಜೈಲು ಪಾಲಾಗಿದ್ದ. ಬಳಿಕ ಬಿಡುಗಡೆಗೊಂಡು ಮಂಗಳೂರಲ್ಲಿ ಲ್ಯಾಂಡ್ರಿ ಅಂಗಡಿ ಮತ್ತು ಫೈನಾನ್ಸ್ ಮಾಡಿ ಬಡ್ಡಿಗೆ ಹಣ ನೀಡುವ ವ್ಯವಹಾರ ಮಾಡಿಕೊಂಡು ವಾಸವಾಗಿದ್ದ.
ಆಂಧ್ರಪ್ರದೇಶ ಮುಖ್ಯಮಂತ್ರಿ ಪರಿಹಾರ ನಿಧಿ(CMRF) ಹಗರಣದಲ್ಲಿ ಬಾಲಕೃಷ್ಣ ಸುವರ್ಣ ಆರೋಪಿ:
ಆಂಧ್ರಪ್ರದೇಶದ ಮುಖ್ಯಮಂತ್ರಿ ಪರಿಹಾರ ನಿಧಿ(CMRF)ಯ ಹಣವನ್ನು ಮೂಡಬಿದಿರೆ ಸ್ಟೇಟ್ ಬ್ಯಾಂಕ್ ನಲ್ಲಿ ನಕಲಿ ಚೆಕ್ , ಸಿಲ್, ಸಹಿ ಬಳಸಿ 56 ಕೋಟಿ ರೂಪಾಯಿ ಹಣ ಡ್ರಾ ಮಾಡಲು ಪ್ರಯತ್ನಿಸಿದಾಗ ಬ್ಯಾಂಕ್ ಸಿಬ್ಬಂದಿಗಳಿಗೆ ಅನುಮಾನ ಬಂದು ಆಂಧ್ರಪ್ರದೇಶಕ್ಕೆ ಸರಕಾರಕ್ಕೆ ಈ ಮಾಹಿತಿ ಕೊಟ್ಟಿದ್ದು ಅಲ್ಲಿ ನಕಲಿ ಚೆಕ್ ಎಂದು ತಿಳಿದ ಬಳಿಕ ಆಂಧ್ರಪ್ರದೇಶದ ತುಲ್ಲೂರು ಪೊಲೀಸ್ ಠಾಣೆಯಲ್ಲಿ ಎಫ್ಕರೆದವಹಿಸಲಾಗಿತ್ತು. ಆಂಧ್ರಪ್ರದೇಶ ಸರಕಾರದ ಕಂದಾಯ ಇಲಾಖೆಯ ಸಹಾಯಕ ಕಾರ್ಯದರ್ಶಿ ಪಿ.ಮುರುಳಿ ಕೃಷ್ಣ ರಾವ್, ಬಳಿಕ ಆಂಧ್ರಪ್ರದೇಶದ ಪೊಲೀಸರು ಮಂಗಳೂರು ಪೊಲೀಸರ ಸಹಾಯದಿಂದ ದಿನಾಂಕ 07-10-2020 ರಂದು ಒಟ್ಟು ಪ್ರಕರಣದಲ್ಲಿ ಭಾಗಿಯಾದ ಆರು ಜನರನ್ನು ವಶಕ್ಕೆ ಪಡೆದು ಕರೆದೊಯ್ಯುದಿದ್ದರು.
ಬಳಿಕ ಈ ಪ್ರಕರಣವನ್ನು ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅಪರಾಧ ತನಿಖಾ ಸಂಸ್ಥೆ (ಸಿಐಡಿ) ಹಾಗೂ ಇಲಾಖೆಯ ಒಳಗೆ ಅಂತರಿಕ ತನಿಖೆಗೆ (ಎಸಿಬಿ) ಭ್ರಷ್ಟಾಚಾರ ನಿಗ್ರಹ ದಳ ತನಿಖಾ ಸಂಸ್ಥೆಗೆ ವಹಿಸಲಾಗಿತ್ತು. ಅವರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿ ಜೈಲಿಗೆ ಕಳುಹಿಸಿದ್ದರು. ಈ ಪ್ರಕರಣದಲ್ಲಿ ಬಾಲಕೃಷ್ಣ ಸುವರ್ಣ ಕೂಡ ಒಬ್ಬನಾಗಿ ಮೂರು ತಿಂಗಳು ಆಂಧ್ರಪ್ರದೇಶದ ಜೈಲಿನಲ್ಲಿದ್ದು ಬಂದಿದ್ದ.
ಬಾಲಕೃಷ್ಣ ಸುವರ್ಣ ನ ಬಾವ ಕೂಡ ಅರೆಸ್ಟ್:ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಗೆ ನಕಲಿ ದಾಖಲೆ ಸಲ್ಲಿಸಿ ಸಾಲ ಪಡೆದು ವಂಚನೆ ಮಾಡಿದ ಪ್ರಕರಣದಲ್ಲಿ ಬಾಲಕೃಷ್ಣ ಪೂಜಾರಿಯ ಹೆಂಡತಿಯ ತಮ್ಮನಾದ (ಬಾವ) ಬೆಳ್ತಂಗಡಿ ತಾಲೂಕಿನ ಸೋಣಾಂದೂರು ಗ್ರಾಮದ ಜಯರಾಮ್ ಸಾಲಿಯಾನ್ ಅವರ ಮಗನಾದ ದೀಕ್ಷಿತ್ ರಾಜ್ ನನ್ನು ತಾನು ಮಾಡುವ 36 ಲಕ್ಷ ಸಾಲಕ್ಕೆ ಉಪಾಯದಿಂದ ಜಾಮೀನು ಹಾಕಿಸಿ ಇದೀಗ ಬಾವನ ಜೊತೆಯಲ್ಲಿ ಸ್ನೇಹಿತ ಕೂಡ ಜೈಲು ಸೇರುವಂತಾಗಿದೆ.