ಚಿಕ್ಕಮಗಳೂರು: ಚಿಕ್ಕಮಗಳೂರಿನ ತೊಗರಿ ಹಂಕಲ್ ಗ್ರಾಪಂ ವ್ಯಾಪ್ತಿಯ ಮುತ್ತಿನಪುರ ಗ್ರಾಮದಲ್ಲಿ ಸ್ಥಳೀಯರಿಗೆ ಹುಲಿ ಪ್ರತ್ಯಕ್ಷವಾಗಿದ್ದು ಜನ ಆತಂಕದಲ್ಲಿ ದಿನ ಕಳೆಯುವಂತಾಗಿದೆ.
ಸುತ್ತಮುತ್ತಲಿನ ಗ್ರಾಮಸ್ಥರು ಅತೀವವಾದ ಆತಂಕವನ್ನು ವ್ಯಕ್ತಪಡಿಸಿದ್ದಾರೆ. ಈ ಭಾಗದ ಸುತ್ತಮುತ್ತಲಿನ ಗ್ರಾಮದಲ್ಲಿ ಹೆಚ್ಚು ಕೂಲಿ ಕಾರ್ಮಿಕರಿದ್ದು, ಮಲೆನಾಡಿಗರು ಜೀವನ ನಿರ್ವಹಣೆಗಾಗಿ ಕೃಷಿಯನ್ನು ಆಧರಿಸಿರುವ ಕಾರಣ ಗದ್ದೆ, ತೋಟಗಳಲ್ಲಿ ಕೆಲಸ ಮಾಡಲೇಬೇಕಿದೆ ಆದರೆ ವ್ಯಾಘ್ರ ಪ್ರತ್ಯಕ್ಷವಾಗಿದ್ದು ಕಾರ್ಮಿಕರಲ್ಲಿ ಹಾಗೂ ಕೃಷಿಕರಲ್ಲಿ ಭೀತಿ ಉಂಟುಮಾಡಿದೆ.
ಹುಲಿಯು ಮುತ್ತಿನಪುರ ಗ್ರಾಮದ ಚಂದ್ರಶೇಖರಯ್ಯ ಎಂಬುವವರ ಕಾಫಿ ತೋಟದಲ್ಲಿ ಪ್ರತ್ಯಕ್ಷವಾಗಿದ್ದು, ವ್ಯಾಘ್ರನ ದಾಳಿಗೆ ಅವರಿಗೆ ಸೇರಿದ ಎರಡು ಹಸು ಮತ್ತು ಮೋಹನ್ ಎಂಬುವವರ ಒಂದು ಹಸು ಬಲಿಯಾಗಿದೆ ಎಂದು ಗ್ರಾಮಸ್ಥರಾದ ರವಿ ತಿಳಿಸಿದ್ದಾರೆ.
ಬೆಳಗ್ಗೆ ಮೇಯಲು ಹೋದ ಹಸುಗಳು ಮನೆಗೆ ಬಾರದಿರುವುದರಿಂದ ಸಂಜೆ ಹುಡುಕಲು ಹೋದಾಗ ಹುಲಿ ಹೆಜ್ಜೆ ಗುರುತುಗಳು ಪತ್ತೆಯಾಗಿದ್ದವು. ಗ್ರಾಮಸ್ಥರ ಕೂಗಾಟದಿಂದ ಹುಲಿ ಕಾಲ್ಕಿತ್ತಿದೆ ಎನ್ನಲಾಗಿದ್ದು ಹುಲಿ ದಾಳಿಯ ನಿಯಂತ್ರಣಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಈ ಕುರಿತಾಗಿ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬುದಾಗಿ ಸ್ಥಳೀಯರು ಆಕ್ರೋಶ ಹೊರಹಾಕಿದ್ದು, ಹುಲಿ ದಾಳಿಯಿಂದ ಈಗಾಗಲೇ ಹಸುಗಳನ್ನು ಕಳೆದುಕೊಂಡಿರುವ ಮಾಲೀಕರಿಗೆ ಪರಿಹಾರ
ಕೊಡಲು ಅರಣ್ಯ ಇಲಾಖೆ ಮುಂದಾಗಬೇಕು ಎಂಬ ಮನವಿ ಮಾಡಿದ್ದಾರೆ.