ಉಡುಪಿ: ಉಡುಪಿಯಿಂದ ಗುಂಡಿಬೈಲು ತೆರಳುವ ಅಂಬಾಗಿಲು ಸಂಪರ್ಕ ರಸ್ತೆಯು ಮತ್ತೆ ಸಮಸ್ಯೆಯ ತಾಣವಾಗಿವಾಗಿದೆ. ಕಳೆದ ಮೂರು ತಿಂಗಳ ಹಿಂದೆ ಅಂಬಾಗಿಲು ಭಾಗದಲ್ಲಿ ಆರಂಭವಾಗಿದ್ದ ಒಳಚರಂಡಿ ಕಾಮಗಾರಿಯು ಇದೀಗ ಮುಕ್ತಾಯದತ್ತ ಸಾಗುತಿದ್ದರೂ ಅಪೂರ್ಣ ಕಾಮಗಾರಿ ಮತ್ತು ಹೊಂಡ ಗುಂಡಿಗಳಿಂದ ಕೂಡಿದ ರಸ್ತೆಯಿಂದಾಗಿ ವಾಹನ ಸವಾರರು ತೀವ್ರ ಸಂಕಷ್ಟವನ್ನು ಅನುಭವಿಸುತ್ತಿದ್ದಾರೆ.
ಉಡುಪಿಯ ಮೆಹಾನ್ ಕಾಂಪ್ಲೆಕ್ಸ್ ಎದುರು ಭಾಗದಲ್ಲಿನ ರಸ್ತೆಯ ಒಂದು ಭಾಗದಲ್ಲಿ ಕಾಮಗಾರಿಗಾಗಿ ಹೊಂಡವನ್ನು ತೆಗೆಯಲಾಗಿದ್ದು, ಪ್ರಸ್ತುತ ಕಾಮಗಾರಿ ಮುಗಿದು ಕೆಲವೊಂದು ದಿನಗಳಾದರೂ ಹೊಂಡವನ್ನು ವ್ಯವಸ್ಥಿತವಾದ ರೀತಿಯಲ್ಲಿ ಮುಚ್ಚದೇ ಇರುವುದು ಸಂಕಷ್ಟಕ್ಕೆ ಕಾರಣವಾಗಿದೆ. ಕಾಮಗಾರಿ ಪೂರ್ತಿಯಾದಾಗ ಕೇವಲ ಮಣ್ಣನ್ನು ತುಂಬಿಸಿ ಇಡಲಾಗಿದ್ದು ಅಪಾಯದ ಸೂಚನೆ ಎಂಬಂತೆ ಬ್ಯಾರಿಕೇಡ್ ಅನ್ನು ಕೂಡಾ ಇಡಲಾಗಿದೆ. ಅಷ್ಟೇ ಅಲ್ಲದೆ ಇದೇ ಭಾಗದಲ್ಲಿ ವಾರಾಹಿ ನೀರಿನ ಪೂರೈಕೆಗಾಗಿ ರಸ್ತೆಯನ್ನು ಅಗೆದು ಪೈಪ್ ಲೈನ್ ಅನ್ನು ಹಾಕಲಾಗಿದ್ದು ಇದನ್ನು ಕೂಡಾ ಗುತ್ತಿಗೆದಾರರು ಅರ್ಧಕ್ಕೆ ಮುಗಿಸಿ ಕೈ ಚೆಲ್ಲಿದ್ದಾರೆ ಎನ್ನುವ ಆರೋಪಗಳು ಕೇಳಿ ಬರುತ್ತಿದೆ. ಇನ್ನೂ ಡಾಮಾರ್ ಹಾಕದೇ ಇರುವುದರಿಂದ ವಾಹನ ಸವಾರರು, ಪಾದಚಾರಿಗಳಿಗೆ ನಿತ್ಯ ಸಂಚಾರಕ್ಕೆ ಈ ರಸ್ತೆ ಅಪಾಯಕಾರಿಯಾಗಿ ಪರಿಣಮಿಸಿದೆ.
ಉಡುಪಿ-ಗುಂಡಿಬೈಲು-ಅಂಬಾಗಿಲು ರಸ್ತೆಯಲ್ಲಿ ಪ್ರತಿದಿನ ನೂರಾರು ಮಂದಿ ವಾಹನ ಸವಾರರು ಸಂಚಾರ ನಡೆಸುತ್ತಿದ್ದು, ಉಡುಪಿ ನಗರ ಮತ್ತು ರಾಷ್ಟ್ರೀಯ ಹೆದ್ದಾರಿ 66 ನ್ನು ಸಂಪರ್ಕಿಸುವ ಪ್ರಮುಖ ರಸ್ತೆ ಇದಾಗಿದೆ. ಮಳೆಗಾಲದ ದಿನಗಳಲ್ಲಿ ಈ ರಸ್ತೆಯಿಂದ ಹೆಚ್ಚಿನ ಅಪಾಯವಾಗುವ ಸಾಧ್ಯತೆಯಿದ್ದು, ತಕ್ಷಣವೇ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ರಸ್ತೆಯನ್ನು ಸುಸ್ಥಿತಿಗೆ ತರಬೇಕು ಎಂಬುದು ಸ್ಥಳೀಯರ ಮನವಿಯಾಗಿದೆ.
ಪೈಪ್ ಲೈ್ನ್ ಕಾಮಗಾರಿ ನಡೆಸಿದ ಕಡೆ ಕೇವಲ ಸಿಮೆಂಟ್ ನ ಒಂದು ಬೆಡ್ ಮಾತ್ರ ಹಾಕಲಾಗಿದ್ದು ರಸ್ತೆಯ ಎರಡೂ ಪಾರ್ಶ್ವದಲ್ಲಿ ವಿವಿದ ಕಾಮಗಾರಿಗಳಿಗಾಗಿ ನಡೆಸಿದ ಅಗೆತ ಮತ್ತು ಹೊಂಡಗಳಿಂದಾಗಿ ಸಂಪೂರ್ಣ ರಸ್ತೆಯೇ ಹಾಳಾಗಿದ್ದು ವಾಹನ ಸವಾರರು ಸರ್ಕಸ್ ನಡೆಸುತ್ತಲೇ ವಾಹನ ಚಲಾಯಿಸಬೇಕಾದ ಪರಿಸ್ಥಿತಿ ಎದುರಾಗಿದೆ.