ಮಂಗಳೂರು: ಬಂಟ್ವಾಳದ ಸಂಚಯಗಿರಿಯಲ್ಲಿರುವ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಹಾಗೂ ತುಳು ಬದುಕು ವಸ್ತು ಸಂಗ್ರಹಾಲಯ ಇಂದು ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಂಪನ್ಮೂಲ ಕೇಂದ್ರವಾಗಿ ಬೆಳೆಯುತ್ತಿದೆ. ಇದೀಗ ಇಲ್ಲಿ ರಾಣಿ ಅಬ್ಬಕ್ಕಳ ಪ್ರತಿಮೆಯನ್ನು ಅನಾವರಣಗೊಳ್ಳಲಿದೆ.
ಹೆಸರಾಂತ ಚಿತ್ರಕಲಾವಿದ ವಾಸುದೇವ ಕಾಮತ್ ಅವರು ಬಿಡಿಸಿರುವ ಅಬ್ಬಕ್ಕಳ ತೈಲಚಿತ್ರದ ಮಾದರಿಯಲ್ಲಿಯೇ ಈ ಪ್ರತಿಮೆಯನ್ನು ಸಿದ್ಧಗೊಳಿಸಲಾಗುತ್ತಿದೆ. ಸುಮಾರು ಐದು ಅಡಿ ಎತ್ತರದ ಈ ಪ್ರತಿಮೆಯು ಮೇ 13ರ ಸಂಜೆ 4ರಂದು ಅನಾವರಣಗೊಳ್ಳಲಿದೆ. ಸುಪ್ರೀಂ ಕೋರ್ಟ್ ನ ನಿವೃತ್ತ ನ್ಯಾಯಾಧೀಶ ಎನ್.ಸಂತೋಷ್ ಹೆಗ್ಡೆಯವರು ಅಬ್ಬಕ್ಕಳ ಪ್ರತಿಮೆಯನ್ನು ಅನಾವರಣಗೊಳಿಸಲಿದ್ದಾರೆ.
ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಹಾಗೂ ತುಳು ಬದುಕು ವಸ್ತು ಸಂಗ್ರಹಾಲಯ ಅಧ್ಯಕ್ಷ ಡಾ.ತುಕಾರಾಮ ಪೂಜಾರಿಯವರು ಮಾತನಾಡಿ, ಪೋರ್ಚುಗೀಸರಿಗೆ ಸಿಂಹಸ್ವಪ್ನಳಾಗಿ ಕರಾವಳಿಯಿಂದ ಅವರನ್ನು ಬಡಿದೋಡಿಸುವ ಅಸಾಧ್ಯ ಹೋರಾಟ ಮಾಡಿರುವ ಅಬ್ಬಕ್ಕಳ ವಿಚಾರದಲ್ಲಿ ಸಾಕಷ್ಟು ಮಂದಿಗೆ ತಿಳಿದಿಲ್ಲ. ಶ್ರಮಜೀವಿಗಳ ಏಳಿಗೆಗಾಗಿ ನಿರಂತರ ದುಡಿದು, ತನ್ನ ರಾಜ್ಯವನ್ನು ಉಳಿಸಲು ದಿಟ್ಟತನದಿಂದ ಹೋರಾಟ ಮಾಡಿದ ರಾಣಿ ಅಬ್ಬಕ್ಕಳ ಬಗ್ಗೆ ಜಗತ್ತಿಗೆ ಸಾರುವ ನಿಟ್ಟಿನಲ್ಲಿ ಈ ಪ್ರತಿಮೆಯನ್ನು ಅನಾವರಣ ಮಾಡಲಾಗುತ್ತಿದೆ ಎಂದು ಹೇಳಿದರು.