ನವದೆಹಲಿ: ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಸೃಷ್ಟಿಸಿರುವ ಕಚ್ಚಾ ಬಾದಾಮ್ ಹಾಡನ್ನು ಬಹುತೇಕರು ಕೇಳಿ ಇರ್ತಾರೆ. ಕಡ್ಲೆ ಕಾಯಿ ವ್ಯಾಪಾರಿಯೊಬ್ಬ ಶೇಂಗಾ ವ್ಯಾಪಾರಕ್ಕಾಗಿ ಹಾಡುತ್ತಿದ್ದರು. ಈ ಹಾಡು ಇಷ್ಟರಮಟ್ಟಿಗೆ ಹಿಟ್ ಆಗುತ್ತೆ ಅಂತಾ ಯಾರು ಕೂಡ ಊಹಿಸಿರಲ್ಲ.
ಈ ಹಾಡಿನ ಮೂಲಕ ಪಶ್ಚಿಮ ಬಂಗಾಳದ ಬಿರ್ಭಮ್ ನಿವಾಸಿ ಶೇಂಗಾ ವ್ಯಾಪಾರಿ ಭುಬನ್ ಬದ್ಯಕರ್ ರಾತ್ರೋರಾತ್ರಿ ಸೂಪರ್ ಸ್ಟಾರ್ ಆಗಿದ್ದಾರೆ. ಇನ್ನು ಬದ್ಯಕರ್ ತನ್ನ ಹಾಡಿಗಾಗಿ ಗೋಧುಲಿಬೆಲಾ ಮ್ಯೂಸಿಕ್ ಕಂಪನಿಯಿಂದ 3 ಲಕ್ಷ ರೂಪಾಯಿ ಪಡೆದಿದ್ದಾರೆ. ಕಚ್ಚಾ ಬಾದಾಮ್ ಒರಿಜಿನಲ್ ಸಾಂಗ್ ಅನ್ನು ರೀಮಿಕ್ಸ್ ಮಾಡಲು ಸಂಭಾವನೆಯಾಗಿ ಹಾಡಿನ ಸೃಷ್ಟಿಕರ್ತ ಬದ್ಯಕರ್ಗೆ ಗೌರವ ಧನವಾಗಿ 3 ಲಕ್ಷ ರೂ. ನೀಡಲಾಗಿದೆ.
ಈ ಸಾಂಗ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದಾಗ ಭುಬನ್ ಬದ್ಯಕರ್ಗೆ ಹಣ ಸಿಕ್ಕಿರಬಹುದಾ ಅಥವಾ ದುರ್ಬಳಕೆ ಮಾಡಿಕೊಂಡಿರಬಹುದಾ ಎಂದು ಅನೇಕರು ಕಳವಳ ವ್ಯಕ್ತಪಡಿಸಿದ್ದರು. ಈ ಹಾಡಿನ ಮೂಲ ಸೃಷ್ಟಿಕರ್ತ ಎಂಬ ಗೌರವ ಬದ್ಯಕರ್ಗೆ ಸಿಗುತ್ತಿಲ್ಲ ಎಂದು ಹಲವರು ಬೇಸರ ವ್ಯಕ್ತಪಡಿಸಿದ್ದರು.
ಇದರ ಬೆನ್ನಲ್ಲೇ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಗೋಧುಲಿಬೆಲಾ ಮ್ಯೂಸಿಕ್ ಕಂಪನಿ ಹೆಡ್ ಗೋಪಾಲ್ ಘೋಷ್, ನಾವು ಭುಬನ್ ಜತೆ 3 ಲಕ್ಷ ರೂಪಾಯಿಗೆ ಒಪ್ಪಂದ ಮಾಡಿಕೊಂಡಿದ್ದೆವು ಮತ್ತು ಅದರಲ್ಲಿ ಅರ್ಧದಷ್ಟು ಮೊತ್ತ ಅಂದರೆ 1.5 ಲಕ್ಷದ ಹಣದ ಚೆಕ್ ಅನ್ನು ನೀಡಿದ್ದೇವೆ. ಮುಂದಿನ ವಾರದಲ್ಲಿ ಉಳಿದ ಹಣವನ್ನು ನೀಡುತ್ತೇವೆ ಎಂದು ಹೇಳಿದ್ದಾರೆ.