ಮೂಡುಬಿದಿರೆ: ಪುತ್ತಿಗೆ ಪಂ. ವ್ಯಾಪ್ತಿಯ ಕಂಚಿಬೈಲು ಅರ್ಬಿ ಪ್ರದೇಶದಲ್ಲಿ ಸಿಡಿಲಾಘಾತದಿಂದ ಸ್ಥಳೀಯರೇ ಆದ ಇಬ್ಬರು ಕೂಲಿ ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿದ ದಾರುಣ ಘಟನೆ ಸೋಮವಾರ ಸಂಜೆ ನಡೆದಿದೆ.
ಯಶವಂತ, ಮಣಿಪ್ರಸಾದ ಘಟನೆಯಲ್ಲಿ ಮೃತಪಟ್ಟವರು. ಜತೆಗಿದ್ದ ಮೂವರು ತೀವ್ರವಾಗಿ ಅಸ್ವಸ್ಥರಾಗಿದ್ದು ಮೂಡುಬಿದಿರೆಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಎಲ್ಲರೂ 25-26ರ ಆಸುಪಾಸಿನ ವಯೋಮಾನದವರು.
ಸೋಮವಾರ ಸಂಜೆ 3.30 ರ ಸುಮಾರಿಗೆ ಮೂಡುಬಿದಿರೆಯ ಪುತ್ತಿಗೆ ಪಂಚಾಯತ್ ವ್ಯಾಪ್ತಿಯ ಕಂಚಿಬೈಲ್ ಯೆರುಗುಂಡಿ ಪ್ರದೇಶದಲ್ಲಿ ಸಿಡಿಲು ಸಹಿತ ಭಾರೀ ಮಳೆಯಾಗಿದೆ.
ಈ ಐವರು ಯೆರುಗುಂಡಿ ಫಾಲ್ಸ್‌ಗೆ ತೆರಳಿದ್ದರು ಎಂದು ಹೇಳಲಾಗುತಿದ್ದು ಅಲ್ಲಿ ಇವರಿಗೆ ಸಿಡಿಲು ಬಡಿದಿದೆ ಎಂದು ಹೇಳಲಾಗಿದೆ.
ಕಳೆದ ಮೂರು ದಿನದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು ನಾಲ್ವರು ಸಿಡಿಲಿಗೆ ಮೃತಪಟ್ಟಿದ್ದು ಇದರಿಂದ ಜಿಲ್ಲೆಯಲ್ಲಿ ಉಂಟಾಗುತ್ತಿರುವ ಸಿಡಿಲಿನ ತೀವ್ರತೆಯನ್ನು ಅಂದಾಜಿಸಲಾಗಿದೆ.
ಪುತ್ತೂರಿನ ಒಳಮೊಗ್ರು ಹಾಗೂ ಉಳ್ಳಾಲದಲ್ಲಿ ನಿನ್ನೆ ಹಾಗೂ ಮೊನ್ನೆ ತಲಾ ಒಬ್ಬೊಬ್ಬರು ಸಿಡಿಲಿನ ಅಘಾತಕ್ಕೆ ಬಲಿಯಾಗಿದ್ದಾರೆ.
ಇನ್ನು ಗಣೇಶ , ಸಂದೀಪ ಮತ್ತು ಪ್ರವೀಣ ಆಸ್ಪತ್ರೆಗೆ ದಾಖಲಾಗಿದ್ದು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿದುಬಂದಿದೆ.