ಉಳ್ಳಾಲ: ಮೂವರು ಅಪರಿಚಿತರು ಬಿಜೆಪಿ ಪ್ರಮುಖನ ಮೇಲೆ ತಲವಾರು ದಾಳಿ ನಡೆಸಿ, ಕೊಲೆಗೆ ಯತ್ನಿಸಿದ ಘಟನೆ ನಿನ್ನೆ ರಾತ್ರಿ ಕೊಣಾಜೆ ವಿ.ವಿ ಕ್ಯಾಂಪಸ್ ಹಾಸ್ಟೆಲ್ ಬಳಿ ನಡೆದಿದೆ.
ತಲವಾರು ದಾಳಿಯಲ್ಲಿ ಗಾಯಗೊಂಡ ವ್ಯಕ್ತಿಯನ್ನು ಕೊಣಾಜೆ ಗ್ರಾಮ ಪಂಚಾಯತ್ ಮಾಜಿ ಸದಸ್ಯ ಬಿಜೆಪಿ ಪ್ರಮುಖರಾದ ಪ್ರಕಾಶ್ ಶೆಟ್ಟಿ(41) ಎಂದು ಗುರುತಿಸಲಾಗಿದೆ. ನಿನ್ನೆ ರಾತ್ರಿ 9.30 ಗಂಟೆಗೆ ಕೊಣಾಜೆ ವಿವಿ ಆವರಣದ ಹಾಸ್ಟೆಲ್ ಬಳಿಯ ದುರ್ಗಾ ಫ್ಯಾನ್ಸಿ & ಜನರಲ್ ಸ್ಟೋರ್ ಅಂಗಡಿಯನ್ನು ಬಂದ್ ಮಾಡಿ ಮನೆ ಕಡೆಗೆ ಹೊರಟಾಗ ಅಂಗಡಿಯಿಂದ ಸ್ವಲ್ಪ ದೂರದಲ್ಲಿ ಕಪ್ಪು ಪಲ್ಸರ್ ಬೈಕಿನಲ್ಲಿ ಮೂವರು ಯುವಕರು ಕಾದು ಕುಳಿತಿದ್ದರು.

ಪ್ರಕಾಶ್ ಅವರು ಅಂಗಡಿ ಬಂದ್ ಮಾಡಿ ಪರಿಚಯಸ್ಥ ಮಂಜುನಾಥ್ ಎಂಬವರ ಬೈಕ್ ಏರಿ ಹೊರಟಾಗ ಹಿಂದಿನಿಂದ ಬೈಕ್ ನಲ್ಲಿ ಹಿಂಬಾಲಿಸಿದ ದುಷ್ಕರ್ಮಿಗಳು ಪ್ರಕಾಶ ಅವರನ್ನು ಗುರಿಯಾಗಿಸಿ ತಲವಾರು ಬೀಸಿದ್ದಾರೆ. ಅಪಾಯದ ಮುನ್ಸೂಚನೆ ಅರಿತಿದ್ದ ಪ್ರಕಾಶ್ ಶೆಟ್ಟಿ ತಲವಾರು ಏಟನ್ನು ತಪ್ಪಿಸಲು ಯತ್ನಿಸಿದಾಗ ಇವರ ಬೈಕ್ ಉರುಳಿ ಬಿದ್ದಿದೆ. ಕೂಡಲೇ ಮಂಜುನಾಥ್ ಹಾಗೂ ಪ್ರಕಾಶ್ ಹತ್ತಿರದ ಜನ ವಸತಿ ಸ್ಥಳಕ್ಕೆ ಓಡಿ ಬಚಾವಾಗಿದ್ದಾರೆ. ಪ್ರಕಾಶ್ ಬಲ ಕೈಗೆ ತಲವಾರಿನ ಏಟು ತಗಲಿದ್ದು ಈ ಬಗ್ಗೆ ಅವರು ಕೊಣಾಜೆ ಪೊಲೀಸರಿಗೆ ದೂರು ನೀಡಿದ್ದಾರೆ.