ಕಡಬ: ರೇಬಿಸ್ ವೈರಸ್ ನಿಂದಾಗಿ ಕಾಲೇಜು ವಿದ್ಯಾರ್ಥಿನಿಯೋರ್ವಳು ಮೃತಪಟ್ಟ ಘಟನೆ ಕಡಬದಲ್ಲಿ ನಡೆದಿದೆ.
ಆಲಂಕಾರು ಗ್ರಾಮದ ಕೆದಿಲ ವರ್ಗಿಸ್ ಎಂಬವರ ಪುತ್ರಿ ವಿನ್ಸಿ (17) ಮೃತ ಬಾಲಕಿ. ಈಕೆ ಕಡಬ ಸರಕಾರಿ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯಾಗಿದ್ದು, ಗುರುವಾರ ಬೆಳಗ್ಗೆ ಈಕೆಗೆ ಏಕಾಏಕಿಯಾಗಿ ತಲೆ ನೋವು ಕಾಣಿಸಿಕೊಂಡಿತ್ತು.ತಕ್ಷಣವೆ ಸ್ಥಳೀಯ ಆಸ್ಪತ್ರೆಗೆ ತೆರಳಿ ಔಷಧವನ್ನು ತರಲಾಗಿತ್ತು. ಆದರೆ ಸಂಜೆಯ ವೇಳೆಗೆ ತಲೆ ನೋವುಇನ್ನಷ್ಟು ಜಾಸ್ತಿಯಾಗಿದ್ದು ಆಕೆಯನ್ನು ಪುತ್ತೂರು ಖಾಸಗಿ ಆಸ್ಪತ್ರೆಗೆ ಕರೆದೊಯ್ದು, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ವಿನ್ಸಿ ತಡರಾತ್ರಿ ಮೃತಪಟ್ಟಿದ್ದಾಳೆ.
ಸುಮಾರು ನಾಲ್ಕು ತಿಂಗಳ ಹಿಂದೆ ಆಲಂಕಾರು ಪೇಟೆ ಸೇರಿದಂತೆ ಮೃತಳ ಮನೆಯ ಸುತ್ತಮುತ್ತ ಹುಚ್ಚು ನಾಯಿಯೊಂದು ಕಾಣಿಸಿಕೊಂಡಿತ್ತು. ಈ ಸಂದರ್ಭ ಆಲಂಕಾರು ಪೇಟೆಯಲ್ಲಿರುವ ಬೀದಿನಾಯಿಗಳಿಗೆ ಹಾಗೂ ಇಬ್ಬರ ಮೇಲೆ ದಾಳಿ ನಡೆಸಿತ್ತು. ವಿನ್ಸಿ ಮನೆಯ ನಾಯಿಯೂ ಕೂಡಾ ಕೆಲವು ದಿನಗಳ ಹಿಂದೆ ರೇಬಿಸ್‌ಗೆ ಒಳಗಾಗಿ ಮೃತಪಟ್ಟಿತ್ತು. ಮನೆ ನಾಯಿಯಿಂದ ವೈರಸ್ ವಿದ್ಯಾರ್ಥಿನಿಗೂ ತಗುಲಿರಬಹುದು ಎಂದು ಶಂಕೆ ವ್ಯಕ್ತವಾಗಿದೆ.
2018ರ ಎಪ್ರಿಲ್‌ನಲ್ಲಿ ಮೃತ ವಿನ್ಸಿಯ ಅಣ್ಣ ಅಡ್ಡೋಲೆಯ ಅಜ್ಜಿ ಮನೆಗೆ ಹೋಗಿದ್ದ ಸಂದರ್ಭ ಆಕಸ್ಮಿಕವಾಗಿ ನದಿ ನೀರಿಗೆ ಬಿದ್ದು ಮೃತಪಟ್ಟಿದ್ದ. ಇದೀಗ ದಂಪತಿ ಇದ್ದ ಓರ್ವ ಮಗಳನ್ನೂ ಕಳೆದುಕೊಂಡಿದ್ದಾರೆ.