ಮಂಗಳೂರು:ಜಿಲ್ಲೆಯಲ್ಲಿ ಇಂದಿನಿಂದ ದ್ವಿತೀಯ ಪಿಯುಸಿ ತರಗತಿಗಳು ಆರಂಭಗೊಂಡಿದೆ. ಪದವಿಪೂರ್ವ ಶಿಕ್ಷಣ ಇಲಾಖೆ ಜಿಲ್ಲಾಡಳಿತ ಪ್ರಕಟಿಸಿರುವ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಪ್ರಾಂಶುಪಾಲರಿಗೆ ಸೂಚನೆ ನೀಡಲಾಗಿದ್ದು ಅದರಂತೆ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.
ಕೋವಿಡ್ ಮಾರ್ಗಸೂಚಿ ಪಾಲನೆಯೊಂದಿಗೆ ಬೆಳಗ್ಗೆ 9:30ಕ್ಕೆ ತರಗತಿ ಆರಂಭಗೊಳ್ಳಲಿದ್ದು, ಮಧ್ಯಾಹ್ನ 1:30ರವರೆಗೆ ತರಗತಿ ನಡೆಯಲಿದೆ.ಮಕ್ಕಳ ಹಾಜರಾತಿ ಗರಿಷ್ಠವಾಗಿದ್ದರೆ ಶೇಕಡಾ 50 ರಷ್ಟು ಮಂದಿಗೆ ಮಾತ್ರ ಅವಕಾಶ ನೀಡಿ ಉಳಿದ ವಿದ್ಯಾರ್ಥಿಗಳಿಗೆ ಇತರ ಇತರ ಶಿಪ್ಟ್ ಗಳಲ್ಲಿ ತರಗತಿ ನಡೆಸುವಂತೆ ಅವಕಾಶಗಳು ಮಾಡಿಕೊಡಲಾಗಿದೆ.ಪ್ರಮಾಣಿತ ಕಾರ್ಯಾಚರಣಾ ವಿಧಾನ (ಎಸ್‌ಒಪಿ)ವನ್ನು ಅನುಷ್ಠಾನಗೊಳಿಸುವ ಸಂಪೂರ್ಣ ಜವಾಬ್ದಾರಿಯನ್ನು ಆಯಾ ಕಾಲೇಜಿನ ಪ್ರಾಂಶುಪಾಲರು ವಹಿಸಿಕೊಳ್ಳಬೇಕು ಎಂದು ಸೂಚಿಸಲಾಗಿದೆ.
ಕಾಲೇಜಿನ ಉಪನ್ಯಾಸಕರು ಹಾಗೂ ಸಿಬ್ಬಂದಿ ವರ್ಗದ ಎಲ್ಲರೂ ಕಡ್ಡಾಯವಾಗಿ ಲಸಿಕೆ ಕೊಡಿಸಬೇಕು ಎಂದು ಜಿಲ್ಲಾಧಿಕಾರಿ ಆದೇಶಿಸಿದ್ದು, 18 ವರ್ಷದೊಳಗಿನ ಮಕ್ಕಳಿಗೆ ಇನ್ನೂ ಲಸಿಕೆ ಕೊಡಿಸುವ ಪ್ರಕ್ರಿಯೆ ಶುರುವಾಗಿಲ್ಲ ಹಾಗಾಗಿ ದ್ವಿತೀಯ ಪಿಯು ಕಾಲೇಜು ವಿದ್ಯಾರ್ಥಿಗಳಿಗೆ ಲಸಿಕೆಯ ಸಮಸ್ಯೆ ಸದ್ಯಕ್ಕಿಲ್ಲ.
ಕೇರಳದಿಂದ ಬರುವ ವಿದ್ಯಾರ್ಥಿಗಳನ್ನು 7 ದಿನಗಳ ಕಾಲ ಕ್ವಾರಂಟೈನ್‌ನಲ್ಲಿರಿಸಲು ಮತ್ತು ಕೋವಿಡ್ ಸೋಂಕು ತಗಲಿದ ವಿದ್ಯಾರ್ಥಿಗಳಿಗೆ ವೈದ್ಯಕೀಯ ಆರೈಕೆ ಮಾಡಲು ಕಾಲೇಜುಗಳಲ್ಲೇ ವಸತಿ ಸಹಿತ ಪ್ರತ್ಯೇಕ ಕೋವಿಡ್ ಕೇರ್ ಸೆಂಟರ್‌ಗಳನ್ನು ಕಡ್ಡಾಯವಾಗಿ ತೆರೆಯಲು ಡಿಸಿ ಸೂಚಿಸಿದ್ದಾರೆ.
ಕ್ವಾರಂಟೈನ್‌ನಲ್ಲಿರುವ ವಿದ್ಯಾರ್ಥಿಗಳು ಕೋವಿಡ್ ಕೇರ್ ಸೆಂಟರ್‌ನಲ್ಲೇ ಆನ್‌ಲೈನ್ ತರಗತಿಯಲ್ಲಿ ಭಾಗವಹಿಸುವಂತೆ ಕ್ರಮ ವಹಿಸಬೇಕು.7 ದಿನಗಳ ಕ್ವಾರಂಟೈನ್ ಮುಗಿಸಿದ ವಿದ್ಯಾರ್ಥಿಗಳು ವಾಪಸ್ ಆರ್‌ಟಿಪಿಸಿಆರ್ ಪರೀಕ್ಷೆ ಮಾಡಿಸಿ ನೆಗೆಟಿವ್ ಪ್ರಮಾಣ ಪತ್ರದೊಂದಿಗೆ ತರಗತಿಗೆ ಹಾಜರಾಗಬಹುದು ಎಂದು ಜಿಲ್ಲಾಧಿಕಾರಿ ಸೂಚಿಸಿದ್ದಾರೆ.
ಎಲ್ಲಾ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗವು ಆರ್‌ಟಿಪಿಸಿಆರ್ ಪರೀಕ್ಷೆ ಮಾಡಿಸಿ ನೆಗೆಟಿವ್ ಪ್ರಮಾಣ ಪತ್ರದೊಂದಿಗೆ ಶಿಕ್ಷಣ ಸಂಸ್ಥೆಗೆ ಹಾಜರಾಗಲು ಮತ್ತು ವಸತಿ ನಿಲಯದ ಹಾಗೂ ಸ್ಥಳೀಯ ವಿದ್ಯಾರ್ಥಿಗಳಿಗೆ ಪ್ರತ್ಯೇಕ ತರಗತಿಗಳನ್ನು ನಡೆಸುವಂತೆ ಡಿಸಿ ತಿಳಿಸಿದ್ದಾರೆ.
ಕೇರಳದಿಂದ ಪ್ರತೀ ದಿನ ಬರುವ ವಿದ್ಯಾರ್ಥಿಗಳು ಏಳು ದಿನಗಳಿಗೊಮ್ಮೆ ಆರ್‌ಟಿಪಿಸಿಆರ್ ಪರೀಕ್ಷೆ ಮಾಡಿಸಿ ನೆಗೆಟಿವ್ ಪ್ರಮಾಣ ಪತ್ರದೊಂದಿಗೆ ತರಗತಿಗೆ ಹಾಜರಾಗಬೇಕಾಗಿದೆ. ಕೇರಳದಿಂದ ಪ್ರತೀ ದಿನ ಬರುವ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗವು ಪ್ರತೀ ಏಳು ದಿನಗಳಿಗೊಮ್ಮೆ ಆರ್‌ಟಿಪಿಸಿಆರ್ ಪರೀಕ್ಷೆ ಮಾಡಿಸಿ ನೆಗೆಟಿವ್ ಪ್ರಮಾಣ ಪತ್ರದೊಂದಿಗೆ ಶಿಕ್ಷಣ ಸಂಸ್ಥೆಗೆ ಹಾಜರಾಗಲು ಡಿಸಿ ಸೂಚಿಸಿದ್ದಾರೆ.