Tuesday, June 9, 2026
Homeಕರಾವಳಿಉಡುಪಿಉಡುಪಿಯ ಕೃಷ್ಣ ಮಠದಲ್ಲಿ ಸರಳವಾಗಿ ಕೃಷ್ಣಾಷ್ಟಮಿ ಆಚರಣೆ!

ಉಡುಪಿಯ ಕೃಷ್ಣ ಮಠದಲ್ಲಿ ಸರಳವಾಗಿ ಕೃಷ್ಣಾಷ್ಟಮಿ ಆಚರಣೆ!

- Advertisement -
- Advertisement -

ಉಡುಪಿ: ಕೋವಿಡ್‌ ನಿರ್ಬಂಧದಿಂದಾಗಿ ಉಡುಪಿ ಕೃಷ್ಣಮಠದಲ್ಲಿ ಸೋಮವಾರ ಮತ್ತು ಮಂಗಳವಾರ ಕೃಷ್ಣಾಷ್ಟಮಿಯು ಸಾರ್ವಜನಿಕರ ಭಾಗವಹಿಸುವಿಕೆ ಇಲ್ಲದೆ ಮಠದ ಧಾರ್ಮಿಕ ಸಂಪ್ರದಾಯದಂತೆ ನಡೆಯಲಿದೆ.

ಶ್ರೀಕೃಷ್ಣಮಠದಲ್ಲಿ ಆ. 30ರಂದು ಬೆಳಗ್ಗೆ ಪರ್ಯಾಯ ಅದಮಾರು ಮಠದ ಶ್ರೀಈಶಪ್ರಿಯತೀರ್ಥ ಶ್ರೀಪಾದರು ಲಕ್ಷತುಳಸಿ ಅರ್ಚನೆ ನಡೆಸಲಿದ್ದು, ಬೆಳಗ್ಗೆ ಮಹಾಪೂಜೆ ಬಳಿಕ ರಾತ್ರಿ ಪೂಜೆಯ ನಿವೇದನೆಗೆ ಉಂಡೆ ಕಟ್ಟುವುದಕ್ಕೆ ಸ್ವಾಮೀಜಿ ಮುಹೂರ್ತ ಮಾಡುವರು.

ಮಧ್ಯರಾತ್ರಿ 12.30ಕ್ಕೆ ಈಶಪ್ರಿಯ ತೀರ್ಥರು ಗರ್ಭಗುಡಿಯಲ್ಲಿ ಕೃಷ್ಣನಿಗೆ ಅಘ್ರ್ಯಪ್ರದಾನ ಮಾಡಲಿದ್ದಾರೆ. ನಂತರ ಭಕ್ತರು ಕನಕನ ಕಿಂಡಿಯ ಮುಂಭಾಗದಲ್ಲಿ ಮತ್ತು ವಸಂತ ಮಂಟಪದಲ್ಲಿ ಅಘ್ರ್ಯಪ್ರದಾನ ಮಾಡುವುದಕ್ಕೆ ವ್ಯವಸ್ಥೆ ಮಾಡಲಾಗಿದೆ.

ಆ. 30ರಂದು ಬೆಳಗ್ಗೆ 8ರಿಂದ ಸಂಜೆ 6ರ ವರೆಗೆ, ಆ. 31ರ ಬೆಳಗ್ಗೆ 7.30ರಿಂದ ಮಧ್ಯಾಹ್ನ 1ರ ವರೆಗೆ, ರಥೋತ್ಸವದ ಬಳಿಕ 5 ಗಂಟೆಯಿಂದ ದರ್ಶನಾವಕಾಶವಿದೆ. ಭಕ್ತರು ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಪಾಲಿಸಿ ದರ್ಶನ ಪಡೆಯಬೇಕು. ಯಾತ್ರಾರ್ಥಿಗಳು ವಿಶ್ವಪಥದ ಮೂಲಕ, ಸುದರ್ಶನ ಪ್ರವೇಶ ಪತ್ರ ಹೊಂದಿದ ಸ್ಥಳೀಯರು ಉತ್ತರ ಮತ್ತು ದಕ್ಷಿಣ ದ್ವಾರದಿಂದ ದರ್ಶನ ಪಡೆಯಬಹುದು.

ಆಗಸ್ಟ್ 31 ರಥಬೀದಿಯಲ್ಲಿ ಶ್ರೀ ಕೃಷ್ಣನ ಲೀಲೋತ್ಸವ ಕಾರ್ಯಕ್ರಮ ನಡೆಯುತ್ತದೆ. ಈ ಕಾರ್ಯಕ್ರಮದಲ್ಲಿ ಸಾವಿರಾರು ಭಕ್ತರು ಈವರೆಗೆ ಪಾಲ್ಗೊಳ್ಳುತ್ತಿದ್ದರು. ಕೊರೋನಾ ಸಾಂಕ್ರಾಮಿಕ ಇರುವ ಕಾರಣ, ಈ ಬಾರಿ ನಿಗದಿತ ಭಕ್ತರಿಗೆ ಮಾತ್ರ ಅವಕಾಶ ನೀಡಲಾಗಿದೆ. ಧಾರ್ಮಿಕ ವಿಧಿ-ವಿಧಾನಗಳು ಪ್ರತಿವರ್ಷದಂತೆ ನಡೆಯುತ್ತದೆ ಎಂದು ಪರ್ಯಾಯ ಅದಮಾರು ಮಠ ತಿಳಿಸಿದೆ.

ಈ ಬಾರಿ ಕೃಷ್ಣ ಭಕ್ತರಿಗೆ ವಿತರಣೆ ಮಾಡಲು 40 ಸಾವಿರ ಅಕ್ಕಿಯ ಚಕ್ಕುಲಿಗಳನ್ನು ಸಿದ್ಧ ಮಾಡಿಕೊಳ್ಳಲಾಗಿದೆ. 80 ಸಾವಿರ ವಿವಿಧ ಬಗೆಯ ಉಂಡೆಗಳನ್ನು ಮಠದ ಸಿಬ್ಬಂದಿ ರೆಡಿ ಮಾಡಿದ್ದಾರೆ. ರಥಬೀದಿಯಲ್ಲಿ ಗುರ್ಜಿಗಳನ್ನು ಹಾಕಲಾಗಿದೆ. ಗೊಲ್ಲ ವೇಷದಾರಿಗಳು ಮಡಕೆ ಒಡೆಯುವ ಸಂಪ್ರದಾಯವನ್ನು ಮಾಡಲಿದ್ದಾರೆ. ಶ್ರೀಕೃಷ್ಣನ ಮಣ್ಣಿನ ಮೂರ್ತಿಯನ್ನು ರಥಬೀದಿಯಲ್ಲಿ ಉತ್ಸವ ಮಾಡಲಾಗುತ್ತದೆ.

ಕೊರೊನಾ ಕಾರಣದಿಂದ ಜನರ ನೂಕುನುಗ್ಗಲಿಗೆ ಅವಕಾಶ ಕೊಟ್ಟಿಲ್ಲ. ಇದೇ ಕಾರಣದಿಂದ ಮುದ್ದುಕೃಷ್ಣ ವೇಷ ಸ್ಪರ್ಧೆಯನ್ನು ಈ ವರ್ಷವೂ ಏರ್ಪಡಿಸಿಲ್ಲ. ಸರಕಾರದ ನಿಯಮಾನುಸಾರ ವಿಟ್ಲಪಿಂಡಿ ಉತ್ಸವದಲ್ಲಿ ಸಾರ್ವಜನಿಕರು ಪಾಲ್ಗೊಳ್ಳುವುದಕ್ಕೆ ಅವಕಾಶ ನೀಡಿಲ್ಲ. ಮಠದ ಸಿಬ್ಬಂದಿ, ಗೋಪಾಲಕರು ಮಾತ್ರ ಭಾಗವಹಿಸಿ ಮೊಸರುಕುಡಿಕೆ ಉತ್ಸವವನ್ನು ಆಚರಿಸಲಿದ್ದಾರೆ.

- Advertisement -

Latest News

error: Content is protected !!