ಬೆಳ್ತಂಗಡಿ : ಕೊರೋನಾ ವಿರುದ್ದ ಹೋರಾಟದಲ್ಲಿ ವೈದ್ಯರು ಮತ್ತು ಅವರ ತಂಡ, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು, ಇತರ ಸರಕಾರಿ ಇಲಾಖೆಗಳು, ಸಂಘಸಂಸ್ಥೆಗಳು ನಿಸ್ವಾರ್ಥ ಸೇವೆ ಮಾಡಿದ್ದಾರೆ. ದೇಶದಲ್ಲಿ ಸುಮಾರು 100 ಕೋಟಿ ಜನರಿಗೆ ಪ್ರದಾನಿ ನರೇಂದ್ರ ಮೋದಿ ಸರಕಾರ ಉಚಿತ ಲಸಿಕೆ ನೀಡಿದ್ದು, ಬೆಳ್ತಂಗಡಿ ತಾಲೂಕಿನಲ್ಲಿ ಶೇ.95 ರಷ್ಟು ಮಂದಿಗೆ ಲಸಿಕೆ ನೀಡಲಾಗಿದೆ. ಜಗತ್ತಿನಲ್ಲೇ ಉಚಿತ ಲಸಿಕೆ ನೀಡಿದ ದೇಶ ಭಾರತವಾಗಿದೆ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.
ಅವರು ಬುಧವಾರ ಚೈಲ್ಡ್ ಫಂಡ್ ಮಕ್ಕಳ ಅಭಿವೃದ್ಧಿ ಸಂಸ್ಥೆಯಿಂದ ನೀಡಲಾದ ಬೆಳ್ತಂಗಡಿ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ಸುಮಾರು 3.50 ಲಕ್ಷ ರೂ. ವೆಚ್ಚದ ಉಪಕರಣ ಹಸ್ತಾಂತರಿಸಿ ಮಾತನಾಡಿದರು.

ಚೈಲ್ಡ್ ಫಂಡ್ ಮಕ್ಕಳ ಅಭಿವೃದ್ಧಿ ಸಂಸ್ಥೆಯಿಂದ ನಮ್ಮ ಸರಕಾರಿ ಆಸ್ಪತ್ರೆಗೆ ಸುಮಾರು 3.50 ಲಕ್ಷದ ವೈದ್ಯಕೀಯ ಉಪಕರಣಗಳನ್ನು ನೀಡಿದ್ದಾರೆ. ಅಲ್ಲದೆ ಆಶಾ, ಆರೋಗ್ಯ ಸಹಾಯಕಿಯರಿಗೆ, ಅಂಗನವಾಡಿ ಕಾರ್ಯಕರ್ತೆಯರಿಗೆ ಆರೋಗ್ಯ ಪರಿಕರಗಳನ್ನು ನೀಡಿರುವುದಕ್ಕೆ ಅಭಿನಂದಿಸುತ್ತೇನೆ. ಇವರ ಜೊತೆಗೆ ಇನ್ನಷ್ಟು ಸಂಘಸಂಸ್ಥೆಗಳು ಕೂಡಾ ಆಸ್ಪತ್ರೆಗೆ ಸಹಕಾರ ನೀಡಿದ್ದಾರೆ ಎಂದು ಈ ಸಂದರ್ಭ ಸ್ಮರಿಸಿದರು.

ಚೈಲ್ಡ್ ಫಂಡ್ ಮಕ್ಕಳ ಅಭಿವೃದ್ಧಿ ಸಂಸ್ಥೆಯ ಕಾರ್ಯಕ್ರಮ ವ್ಯವಸ್ಥಾಪಕ ಅನೋಜ್ ಪ್ರಸ್ತಾವಿಸಿ ಮಾತನಾಡಿ, ಚೈಲ್ಡ್ ಫಂಡ್ ಮಕ್ಕಳ ಅಭಿವೃದ್ಧಿ ಸಂಸ್ಥೆಯ ವತಿಯಿಂದ ಕೋವಿಡ್-19 ನಂತಹ ಕಾಯಿಲೆಗಳ ವಿರುದ್ಧ ಹೋರಾಡಲು ದ.ಕ. ಜಿಲ್ಲೆಯ ಸರಕಾರಿ ಆಸ್ಪತ್ರೆಗಳಿಗೆ ವೈದ್ಯಕೀಯ ಉಪಕರಣಗಳನ್ನು ನೀಡುತ್ತಿದ್ದು, ಬೆಳ್ತಂಗಡಿ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ಸುಮಾರು 3.50 ಲಕ್ಷ ರೂ. ವೆಚ್ಚದ ಉಪಕರಣ ವಿತರಿಸಲಾಗುತ್ತಿದೆ ಎಂದರು.

ವೇದಿಕೆಯಲ್ಲಿ ತಾಲೂಕು ಆಡಳಿತಾಧಿಕಾರಿ ಡಾ. ಕಲಾಮಧು, ಸಾರ್ವಜನಿಕ ಆಸ್ಪತ್ರೆ ಆಡಳಿತ ವೈದಾಧಿಕಾರಿ ಡಾ. ವಿದ್ಯಾವತಿ, ಡಾ. ಆಶಾಲತಾ, ಆರೋಗ್ಯ ಶಿಕ್ಷಣಾಧಿಕಾರಿ ಅಮ್ಮಿ ಇದ್ದರು.
ಇದೇ ಸಂದರ್ಭ 246 ಮಂದಿ ಆಶಾ ಕಾರ್ಯಕರ್ತೆಯರು, 57 ಮಂದಿ ಕಿರಿಯ ಆರೋಗ್ಯ ಸಹಾಯಕಿಯರು ಹಾಗೂ 324 ಅಂಗನವಾಡಿ ಕಾರ್ಯಕರ್ತೆಯರಿಗೆ ಆರೋಗ್ಯ ಪರಿಕರಗಳನ್ನು ನೀಡಲಾಯಿತು. ಬೆಳ್ತಂಗಡಿ ಆರೋಗ್ಯ ಇಲಾಖೆಯ ತಾಲೂಕು ಕಾರ್ಯಕ್ರಮ ಸಂಯೋಜಕ ಅಜಯ್ ಕಲ್ಲೇಗ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು.