ಥೈಲ್ಯಾಂಡ್: ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಅಭಿಮಾನಿಗಳಿಗೆ ಬೇಸರದ ಸುದ್ದಿಯೊಂದಿದೆ. ಒಲಿಂಪಿಕ್ ಕಂಚಿನ ಪದಕ ವಿಜೇತೆ ಹಾಗೂ ವಿಶ್ವದ ಮಾಜಿ ನಂಬರ್ 1 ಆಟಗಾರ್ತಿ ಸೈನಾ ನೆಹ್ವಾಲ್ ಅವರಿಗೂ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ.

ಸೈನಾ ಥಾಯ್ಲೆಂಡ್ ಓಪನ್ ನಲ್ಲಿ ಪಂದ್ಯಾವಳಿಗೂ ಮುನ್ನಾ ಕೊರೋನಾ ಪರೀಕ್ಷೆಗೆ ಒಳಗಾಗಿದ್ದಾರೆ. ಇಂದು ಅದರ ವರದಿ ಬಂದಿದ್ದು ಅವರಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಸೈನಾಗೆ ಕೊರೊನಾ ಕಾಣಿಸಿಕೊಂಡ ಕಾರಣ ವಿಶ್ರಾಂತಿ, ಸಾಮಾಜಿಕ ಅಂತರ ಅನಿವಾರ್ಯವಾಗಿದೆ. ಹೀಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ತಿಳಿದು ಬಂದಿದೆ.

ಇದರ ಪರಿಣಾಮವಾಗಿ ಮೊದಲ ಸುತ್ತಿನಲ್ಲಿ ಎದುರಾಳಿ ಕಿಸನಾ ಸೆಲ್ವದುರೆ ವಾಕ್ ಓವರ್ ಪಡೆದಿದ್ದಾರೆ. ಈ ಮಧ್ಯೆ, ಪಿ.ವಿ.ಸಿಂಧು ಅವರು ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಕ್ಯಾಲೆಂಡರ್ ನಲ್ಲಿ ನಡೆದ ಮೊದಲ ಮಹಿಳಾ ಸಿಂಗಲ್ಸ್ ನಲ್ಲಿ ಏಕೈಕ ಭಾರತೀಯ ಆಟಗಾರ್ತಿಯಾಗಿ ಉಳಿದಿದ್ದಾರೆ.

ಕೊರೊನಾ ಹಿನ್ನಲೆಯಲ್ಲಿ ಕಳೆದ 10 ತಿಂಗಳಿಂದ ಯಾವುದೇ ಪಂದ್ಯಾವಳಿ ನಡೆದಿರಲಿಲ್ಲ. ದೊಡ್ಡ ಬ್ರೇಕ್ ನಂತ್ರ ಸೈನಾ ಥೈಲ್ಯಾಂಡ್ ಪಂದ್ಯಾವಳಿ ಮೂಲಕ ಮೈದಾನಕ್ಕಿಳಿಯಲು ಸಜ್ಜಾಗಿದ್ದರು. ಇದಕ್ಕೂ ಮೊದಲು ಪ್ರೋಟೋಕಾಲ್ ಬಗ್ಗೆ ಸೈನಾ ಸಾಕಷ್ಟು ಟ್ವಿಟ್ ಮಾಡಿದ್ದರು. ಥೈಲ್ಯಾಂಡ್ ನಲ್ಲಿ ತರಬೇತುದಾರರನ್ನು ಭೇಟಿಯಾಗಲು ಅವಕಾಶ ನೀಡ್ತಿರಲಿಲ್ಲ. ಕ್ರೀಡಾ ಸಿಬ್ಬಂದಿ ಭೇಟಿಗೂ ಅವಕಾಶ ನೀಡ್ತಿರಲಿಲ್ಲವೆಂದು ಸೈನಾ ಹೇಳಿದ್ದರು. ಈಗ ಕೊರೊನಾ ಸೋಂಕು ದೃಢಪಟ್ಟ ಕಾರಣ 30 ವರ್ಷದ ಸೈನಾ ಪಂದ್ಯದಿಂದ ಹೊರಗುಳಿಯುವುದು ಅನಿವಾರ್ಯವಾಗಿದೆ.
ಯೋನೆಕ್ಸ್ ಥೈಲ್ಯಾಂಡ್ ಓಪನ್ ಜನವರಿ 12 ರಿಂದ 17 ರವರೆಗೆ ನಡೆಯಲಿದೆ. ಇದರ ನಂತರ, ಟೊಯೋಟಾ ಥೈಲ್ಯಾಂಡ್ ಓಪನ್ ಜನವರಿ 19 ರಿಂದ 24 ರವರೆಗೆ ನಡೆಯಲಿದೆ. ಬಿಡಬ್ಲ್ಯೂಎಫ್ ವರ್ಲ್ಡ್ ಟೂರ್ ಫೈನಲ್ಸ್ ಜನವರಿ 27 ರಿಂದ 31 ರವರೆಗೆ ನಡೆಯಲಿದೆ. ಕೊರೋನಾದ ಹಿನ್ನಲೆಯಲ್ಲಿ ಸೈನಾ ಇದ್ಯಾವ ಟೂರ್ನಿಯಲ್ಲೂ ಭಾಗವಹಿಸುವುದಿಲ್ಲ.


