ಬೆಳಗಾವಿ: ನೀವು ಹಾವು ಹಿಡಿಯುವವರಾಗಿದ್ದಲ್ಲಿ ನಿಮ್ಮನ್ನು ಯಾವಾಗ ಬೇಕಾದರೂ ಸಹ ಅವುಗಳನ್ನು ಹಿಡಿಯಲೆಂದು ಜನರು ಕರೆಯಬಹುದು. ಮದುವೆಯೊಂದರಲ್ಲಿ ಭಾಗಿಯಾಗಲು ಹೊರಟಿದ್ದ ಹಾವಾಡಗಿತ್ತಿಯೊಬ್ಬರಿಗೆ ಹಾವು ಹಿಡಿಯಲು ಮನೆಯೊಂದರಿಂದ ಕರೆ ಬಂದಿದೆ.

ತಾವು ಮದುವೆಗೆ ಸಿದ್ಧವಾಗಿದ್ದ ದಿರಿಸಿನಲ್ಲೇ ಮನೆಗೆ ಹೋದ ಈ ಧೈರ್ಯವಂತೆ ಯಾವುದೇ ದೊಡ್ಡ ಸಾಧನಗಳಿಲ್ಲದೆ ನಾಗರ ಹಾವನ್ನು ಹಿಡಿದಿದ್ದಾರೆ. ಸದ್ಯ ಸೀರೆಯುಟ್ಟ ಉರಗ ರಕ್ಷಕಿಯ ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ.

ಇದು ಉರಗ ರಕ್ಷಕಿ ನಿರ್ಜರಾ ಚಿಟ್ಟಿ ಅವರ ಸಾಹಸ ಕತೆ. ಸೀರೆಯುಟ್ಟು ಹಾವನ್ನು ಹಿಡಿಯುವುದು ಸುಲಭವಲ್ಲ. ಆದರೆ, ನಿರ್ಜರಾ ಈ ಕಾರ್ಯದಲ್ಲಿ ಯಶಸ್ಸು ಸಾಧಿಸಿದ್ದಾರೆ. ನಿರ್ಜರಾ ಅವರು ಕರ್ನಾಟಕದವರು. ಬೆಳಗಾವಿಯವರಾದ ನಿರ್ಜರಾ ಮತ್ತು ಇವರ ಪತಿ ಆನಂದ್ ವನ್ಯಜೀವಿ ತಜ್ಞರಾಗಿದ್ದಾರೆ. ಸದ್ಯ ಇವರು ಹಾವನ್ನು ರಕ್ಷಣೆ ಮಾಡುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭರ್ಜರಿಯಾಗಿಯೇ ವೈರಲ್ ಆಗುತ್ತಿದೆ.

ಒಂದು ಕೈಯಲ್ಲಿ ಫೋನ್ ಹಿಡಿದುಕೊಂಡು ಮತ್ತೊಂದು ಕೈಯಲ್ಲಿ ಕೋಲೊಂದನ್ನು ಹಿಡಿದು ಕಬೋರ್ಡ್ ಹಿಂದೆ ಇದ್ದ ಹಾವನ್ನು ಹಿಡಿದಿದ್ದಾರೆ. ಸೀರೆಯುಟ್ಟುಕೊಂಡಿದ್ದ ಕಾರಣ ತನಗೆ ಹಾವು ಹಿಡಿಯುವುದು ಬಹಳ ಕಷ್ಟವಾದರೂ ಸಹ ಹಿಡಿಯಲು ಸಫಲಳಾಗಿದ್ದಾಗಿ ಅವರು ತಿಳಿಸಿದ್ದಾರೆ.


