
ಚಿಕ್ಕಮಗಳೂರು ತಾಲೂಕಿನ ಬಸಗೂಡು ಗ್ರಾಮದಲ್ಲಿ ವಲಸೆ ಕಾರ್ಮಿಕರ ಮೇಲೆ ಕಾಫಿ ಎಸ್ಟೇಟ್ ಮಾಲೀಕ ಭರತ್ ಎಂಬಾತ ಭೀಕರ ದೌರ್ಜನ್ಯ ಎಸಗಿದ್ದಾನೆ. ಕೈಯಲ್ಲಿ ಬಂದೂಕು ಹಿಡಿದು, ದೊಣ್ಣೆಯಿಂದ ಮಹಿಳಾ ಕಾರ್ಮಿಕರ ಮೇಲೂ ಮನಬಂದಂತೆ ಹಲ್ಲೆ ನಡೆಸಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಎಂಥವರ ಮನಸ್ಸನ್ನೂ ಕಲಕುವಂತಿದೆ.
ತಮಿಳುನಾಡು ಮೂಲದ ಈ ಕಾರ್ಮಿಕರು, ಕೆಲಸ ಬಿಟ್ಟು ಹೋಗುವುದಾಗಿ ಹೇಳಿದ್ದೇ ಇಷ್ಟೆಲ್ಲಾ ರಾದ್ಧಾಂತಕ್ಕೆ ಕಾರಣವಾಗಿದೆ. ಮುಂಗಡವಾಗಿ ಪಡೆದ ಹಣವನ್ನು ವಾಪಸ್ ಕೊಡಲು ಕಾರ್ಮಿಕರು ಒಪ್ಪಿದ್ದರೂ, ಮಾಲೀಕ ಭರತ್ ಅವರನ್ನು ಜೀತದಾಳುಗಳಂತೆ ನಡೆಸಿಕೊಂಡಿದ್ದಾನೆ. ಮಹಿಳೆಯರು, ಮಕ್ಕಳೆನ್ನದೆ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡಿ ಜೀವ ಬೆದರಿಕೆ ಹಾಕಿದ್ದಾನೆ.
ಹಲ್ಲೆಯಿಂದ ಗಾಯಗೊಂಡ ಮೀನಾ ಎಂಬ ಮಹಿಳೆ ಚಿಕ್ಕಮಗಳೂರಿನ ಮಲ್ಲೇಗೌಡ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಗಲಾಟೆ ವೇಳೆ ಕಿವಿಯಲ್ಲಿದ್ದ ಚಿನ್ನದ ಒಡವೆಯೂ ನಾಪತ್ತೆಯಾಗಿದೆ ಎಂದು ಕಣ್ಣೀರಿಟ್ಟಿದ್ದಾರೆ.
ಸದ್ಯ ಮಲ್ಲಂದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಅಮಾನವೀಯವಾಗಿ ವರ್ತಿಸಿದ ಮಾಲೀಕನ ವಿರುದ್ಧ ಕಠಿಣ ಕ್ರಮ ಕೈಗೊಂಡು ಕಾರ್ಮಿಕರಿಗೆ ನ್ಯಾಯ ಕೊಡಿಸಬೇಕು ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.


