
ಉಡುಪಿ: ಬೆಂಗಳೂರು-ಮಂಗಳೂರು-ಕಾರವಾರ-ಮಡಗಾಂವ್ ನಡುವೆ ಸಂಚರಿಸುವ ನೂತನ ವಂದೇ ಭಾರತ್ ರೈಲಿನ ವೇಗವನ್ನು ಹೆಚ್ಚಿಸಿದರೆ ಪ್ರಯಾಣದ ಅವಧಿಯನ್ನು ಸುಮಾರು 2 ಗಂಟೆಗಳಷ್ಟು ಕಡಿಮೆ ಮಾಡಬಹುದು ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ಈ ಕುರಿತು ರೈಲ್ವೆ ಮಂಡಳಿಯ ಕಾರ್ಯಾಚರಣೆ ಮತ್ತು ವ್ಯವಹಾರ ಅಭಿವೃದ್ಧಿ ವಿಭಾಗದ ಸದಸ್ಯರಿಗೆ ಮನವಿ ಸಲ್ಲಿಸಿರುವ ಅವರು, ಘಾಟಿ ಪ್ರದೇಶವನ್ನು ಹೊರತುಪಡಿಸಿ ಇತರ ಮಾರ್ಗಗಳಲ್ಲಿ ರೈಲು ವಿಳಂಬವಾಗುತ್ತಿರುವ ಸಮಯವನ್ನು ನಿಯಮಾನುಸಾರ ಸರಿದೂಗಿಸಿ ವೇಗ ಹೆಚ್ಚಿಸುವಂತೆ ಒತ್ತಾಯಿಸಿದ್ದಾರೆ.
ಪ್ರಸ್ತುತ ಬೆಂಗಳೂರು-ಮಡಗಾಂವ್ ವಂದೇ ಭಾರತ್ ರೈಲು ಪ್ರಯಾಣಕ್ಕೆ ಸುಮಾರು 13 ಗಂಟೆ ಬೇಕಾಗುತ್ತಿದೆ. ಅನಗತ್ಯ ವಿಳಂಬವನ್ನು ತಪ್ಪಿಸಿ, ಪ್ರಯಾಣದ ಸಮಯವನ್ನು ಸಮರ್ಪಕವಾಗಿ ಬಳಸಿಕೊಂಡರೆ 11 ಗಂಟೆಗಳಲ್ಲಿ ಗುರಿ ತಲುಪಲು ಸಾಧ್ಯವಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಈ ರೈಲು ಮಧ್ಯಮ ವರ್ಗದ ಪ್ರಯಾಣಿಕರನ್ನು ಹೆಚ್ಚು ಆಕರ್ಷಿಸುತ್ತಿದ್ದು, ದಿನದಿಂದ ದಿನಕ್ಕೆ ಪ್ರಯಾಣಿಕರ ಸಂಖ್ಯೆ ಹೆಚ್ಚುತ್ತಿದೆ. ಪ್ರಯಾಣದ ಅವಧಿ ಕಡಿಮೆಯಾದರೆ ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಕೋಟ ಶ್ರೀನಿವಾಸ ಪೂಜಾರಿ ಅಭಿಪ್ರಾಯಪಟ್ಟಿದ್ದಾರೆ.


