Wednesday, November 25, 2026
Homeಪ್ರಮುಖ-ಸುದ್ದಿಆಶಾ ಕಾರ್ಯಕರ್ತೆಯರಿಗೆ ₹1,500 ಗೌರವಧನ ಹೆಚ್ಚಳಕ್ಕೆ ಕೇಂದ್ರ ಸಿದ್ಧತೆ; ಸಂಸದ ಡಾ. ಸಿ ಮಂಜುನಾಥ್

ಆಶಾ ಕಾರ್ಯಕರ್ತೆಯರಿಗೆ ₹1,500 ಗೌರವಧನ ಹೆಚ್ಚಳಕ್ಕೆ ಕೇಂದ್ರ ಸಿದ್ಧತೆ; ಸಂಸದ ಡಾ. ಸಿ ಮಂಜುನಾಥ್

- Advertisement -
- Advertisement -

ಗೌರವಧನ ಹೆಚ್ಚಳಕ್ಕೆ ಆಗ್ರಹಿಸಿ ಬೆಂಗಳೂರಿನಲ್ಲಿ ಆಶಾ ಕಾರ್ಯಕರ್ತೆಯರು ನಡೆಸುತ್ತಿರುವ ಪ್ರತಿಭಟನೆ ತೀವ್ರಗೊಂಡಿರುವ ಬೆನ್ನಲ್ಲೇ, ದೇಶದಾದ್ಯಂತ ಕಾರ್ಯನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆಯರ ಗೌರವಧನವನ್ನು ₹1,500 ಹೆಚ್ಚಿಸಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದೆ ಎಂದು ಬೆಂಗಳೂರು ಗ್ರಾಮಾಂತರ ಸಂಸದ ಡಾ. ಮಂಜುನಾಥ್ ತಿಳಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಆಶಾ ಕಾರ್ಯಕರ್ತೆಯರ ಬೇಡಿಕೆಗಳ ಕುರಿತು ರಾಷ್ಟ್ರೀಯ ಆರೋಗ್ಯ ಮಿಷನ್ ನಿರ್ದೇಶಕರೊಂದಿಗೆ ಚರ್ಚಿಸಿದ್ದೇನೆ. ಕಾರ್ಯಕರ್ತೆಯರ ಮನವಿಗೆ ಸ್ಪಂದಿಸುವಂತೆ ಸಲಹೆ ನೀಡಿದ್ದು, ದೇಶಾದ್ಯಂತ ಇರುವ ಆಶಾ ಕಾರ್ಯಕರ್ತೆಯರಿಗೆ ₹1,500 ಗೌರವಧನ ಹೆಚ್ಚಿಸುವ ಪ್ರಸ್ತಾವ ಸಿದ್ಧಪಡಿಸಲಾಗಿದೆ. ಮುಂಬರುವ ಚಳಿಗಾಲದ ಅಧಿವೇಶನದಲ್ಲಿ ಈ ಪ್ರಸ್ತಾವ ಮಂಡನೆಯಾಗಿ ಹೆಚ್ಚಳ ಜಾರಿಯಾಗುವ ನಿರೀಕ್ಷೆಯಿದೆ ಎಂದರು.

ಇದೇ ವೇಳೆ, ಆಶಾ ಕಾರ್ಯಕರ್ತೆಯರ ಗೌರವಯುತ ಜೀವನಕ್ಕೆ ರಾಜ್ಯ ಸರ್ಕಾರವೂ ಗೌರವಧನ ಹೆಚ್ಚಳ ಮಾಡಬೇಕು ಎಂದು ಒತ್ತಾಯಿಸಿದರು. ಬಿಜೆಪಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯದ ಚರ್ಚೆ ಕುರಿತು ಪ್ರತಿಕ್ರಿಯಿಸಿದ ಅವರು, ಪ್ರತ್ಯೇಕ ರಾಜ್ಯದ ಬೇಡಿಕೆ ಸರಿಯಾದ ಕ್ರಮವಲ್ಲ ಎಂದರು. ಉತ್ತರ ಕರ್ನಾಟಕದ ಅಭಿವೃದ್ಧಿಗೆ ಅನುದಾನ ನೀಡುವುದಷ್ಟೇ ಮುಖ್ಯವಲ್ಲ, ಅದನ್ನು ಸಮರ್ಪಕವಾಗಿ ಬಳಸಿ ಜನಪರ ಯೋಜನೆಗಳನ್ನು ಅನುಷ್ಠಾನಗೊಳಿಸಬೇಕು ಎಂದು ಹೇಳಿದರು.

ರಾಜ್ಯದ ಒಟ್ಟು ಆದಾಯದಲ್ಲಿ ಸುಮಾರು ಶೇ.40ರಷ್ಟು ಪಾಲು ಬೆಂಗಳೂರಿನಿಂದ ಬರುತ್ತದೆ. ಬೆಂಗಳೂರು ಪ್ರತ್ಯೇಕವಾದರೆ ಅಭಿವೃದ್ಧಿಗೆ ಅಗತ್ಯವಾದ ಹಣ ಎಲ್ಲಿಂದ ಬರಲಿದೆ? ಅಧಿಕಾರದಲ್ಲಿದ್ದಾಗಲೇ ಅಭಿವೃದ್ಧಿ ಕಾರ್ಯಗಳನ್ನು ಸಮರ್ಪಕವಾಗಿ ಕೈಗೊಂಡರೆ ಪ್ರತ್ಯೇಕ ರಾಜ್ಯದ ಭಾವನೆ ಮೂಡುವುದಿಲ್ಲ ಎಂದು ಅಭಿಪ್ರಾಯಪಟ್ಟರು.

- Advertisement -

Latest News

error: Content is protected !!