
ಮಂಗಳೂರು: ನಗರದಲ್ಲಿ ಕಾನೂನು ಸುವ್ಯವಸ್ಥೆ ಸುಧಾರಿಸಿರುವ ಹಿನ್ನೆಲೆಯಲ್ಲಿ ರಾತ್ರಿ ವ್ಯಾಪಾರದ ಅವಧಿಗೆ ವಿಧಿಸಲಾಗಿದ್ದ ನಿರ್ಬಂಧವನ್ನು ಪೊಲೀಸ್ ಇಲಾಖೆ ಸಡಿಲಗೊಳಿಸಿದೆ. ಇನ್ನು ಮುಂದೆ ರಾತ್ರಿ 11.45ರವರೆಗೆ ಅಂಗಡಿ, ಹೋಟೆಲ್ ಸೇರಿದಂತೆ ವಿವಿಧ ವ್ಯಾಪಾರ ಕೇಂದ್ರಗಳನ್ನು ತೆರೆಯಲು ಅನುಮತಿ ನೀಡಿ ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಆದೇಶ ಹೊರಡಿಸಿದ್ದಾರೆ.
ಕಳೆದ ಒಂದೆರಡು ವರ್ಷಗಳಿಂದ ನಗರದ ಕೆಲವು ಸೂಕ್ಷ್ಮ ಪರಿಸ್ಥಿತಿಗಳು, ಕಾನೂನು ಸುವ್ಯವಸ್ಥೆ ಹಾಗೂ ರಾತ್ರಿ ವೇಳೆ ನಡೆಯಬಹುದಾದ ಅಪರಾಧ ಮತ್ತು ಮಾದಕ ವಸ್ತುಗಳ ಚಟುವಟಿಕೆಗಳನ್ನು ನಿಯಂತ್ರಿಸುವ ಉದ್ದೇಶದಿಂದ ರಾತ್ರಿ 10.30ರವರೆಗೆ ಮಾತ್ರ ವ್ಯಾಪಾರ ನಡೆಸಲು ಸಮಯ ನಿಗದಿಪಡಿಸಲಾಗಿತ್ತು.
ಸದ್ಯ ನಗರದಲ್ಲಿ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಿರುವುದರಿಂದ ಹಿಂದಿನ ಆದೇಶವನ್ನು ಮರುಪರಿಶೀಲಿಸಿ ವ್ಯಾಪಾರದ ಅವಧಿಯನ್ನು ವಿಸ್ತರಿಸಲಾಗಿದೆ. ನೂತನ ಆದೇಶದಂತೆ ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಎಲ್ಲಾ ವ್ಯಾಪಾರ ಕೇಂದ್ರಗಳು, ಅಂಗಡಿಗಳು, ಹೋಟೆಲ್ಗಳು, ರೆಸ್ಟೋರೆಂಟ್ಗಳು, ಟೀ ಸ್ಟಾಲ್ಗಳು ಹಾಗೂ ಪಾನ್ ಅಂಗಡಿಗಳನ್ನು ರಾತ್ರಿ 11.45ರವರೆಗೆ ತೆರೆಯಬಹುದಾಗಿದೆ.
ಆದರೆ, ರಾತ್ರಿ 11.45ರಿಂದ ಬೆಳಿಗ್ಗೆ 5.30ರವರೆಗೆ ಯಾವುದೇ ರೀತಿಯ ವ್ಯಾಪಾರ ಚಟುವಟಿಕೆಗಳನ್ನು ನಡೆಸುವಂತಿಲ್ಲ. ನಿಗದಿತ ಸಮಯದ ನಿಯಮವನ್ನು ಉಲ್ಲಂಘಿಸುವವರ ವಿರುದ್ಧ ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಕಮಿಷನರ್ ಸ್ಪಷ್ಟ ಎಚ್ಚರಿಕೆ ನೀಡಿದ್ದಾರೆ.


