Saturday, November 21, 2026
Homeಕರಾವಳಿಶಾಲಾ ಮಕ್ಕಳಿಂದ ರಾಜಕೀಯ ಘೋಷಣೆಗಳನ್ನು ಕೂಗಿಸಿ, ಮಕ್ಕಳನ್ನು ರಾಜಕೀಯಕ್ಕೆ ಬಳಸಿಕೊಂಡ ಶಾಸಕ ಹರೀಶ್ ಪೂಂಜಾ ನಡೆ...

ಶಾಲಾ ಮಕ್ಕಳಿಂದ ರಾಜಕೀಯ ಘೋಷಣೆಗಳನ್ನು ಕೂಗಿಸಿ, ಮಕ್ಕಳನ್ನು ರಾಜಕೀಯಕ್ಕೆ ಬಳಸಿಕೊಂಡ ಶಾಸಕ ಹರೀಶ್ ಪೂಂಜಾ ನಡೆ ಖಂಡನೀಯ; ಕೀರ್ತನ್ ಗೌಡ ಕೊಡಪಾಲ

- Advertisement -
- Advertisement -

ಮಂಗಳೂರು: ಬೆಳ್ತಂಗಡಿಯ ಪೂಂಜಾಲಕಟ್ಟೆ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕ ಹರೀಶ್ ಪೂಂಜಾ ಅವರು ರಾಜಕೀಯ ಭಾಷಣ ಮಾಡಿದ್ದು, ಶಾಲಾ ಮಕ್ಕಳಿಂದ ರಾಜಕೀಯ ಘೋಷಣೆಗಳನ್ನು ಕೂಗಿಸಿರುವುದಕ್ಕೆ ದ.ಕ. ಜಿಲ್ಲಾ ಎನ್‌ಎಸ್‌ಯುಐ ಉಪಾಧ್ಯಕ್ಷ ಕೀರ್ತನ್ ಗೌಡ ಕೊಡಪಾಲ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಶಾಲೆಗಳು ಮಕ್ಕಳಿಗೆ ಶಿಕ್ಷಣ ಮತ್ತು ಉತ್ತಮ ಭವಿಷ್ಯ ರೂಪಿಸುವ ಸ್ಥಳಗಳಾಗಿವೆ. ಆದರೆ, ಶಾಲೆಯ ಕಾರ್ಯಕ್ರಮದಲ್ಲಿ ಶಾಸಕರು ಕಾಂಗ್ರೆಸ್ ಪಕ್ಷದ ವಿರುದ್ಧ ಅವಹೇಳನಕಾರಿ ಭಾಷಣ ಮಾಡಿರುವುದು ಹಾಗೂ ಮಕ್ಕಳನ್ನು ರಾಜಕೀಯ ಚಟುವಟಿಕೆಗಳಿಗೆ ಬಳಸಿಕೊಂಡಿರುವುದು ಖಂಡನೀಯ ಎಂದು ಹೇಳಿದ್ದಾರೆ.

ರಾಜ್ಯ ಸರ್ಕಾರದ ಅನುದಾನದಲ್ಲಿ ನಿರ್ಮಿಸಲಾದ ಸಭಾಭವನದ ಉದ್ಘಾಟನೆಗೆ ಶಿಷ್ಟಾಚಾರ ಉಲ್ಲಂಘಿಸಿ ಮುಂದಾಗಿದ್ದನ್ನು ಪ್ರಶ್ನಿಸಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ದೂರು ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಉದ್ಘಾಟನಾ ಕಾರ್ಯಕ್ರಮ ರದ್ದಾಗಿತ್ತು. ಆದರೆ, ಬಳಿಕ ಖಾಸಗಿ ಸಂಸ್ಥೆಯೊಂದಕ್ಕೆ ಅಭಿನಂದನೆ ಸಲ್ಲಿಸುವ ನೆಪದಲ್ಲಿ ಶಾಲೆಯ ವೇದಿಕೆಯನ್ನು ರಾಜಕೀಯ ಭಾಷಣಕ್ಕೆ ಬಳಸಿಕೊಳ್ಳಲಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಶಾಲಾ ಮಕ್ಕಳಿಂದ ರಾಜಕೀಯ ನಾಯಕರ ಪರವಾಗಿ ಘೋಷಣೆ ಕೂಗಿಸಿರುವುದು ಶಿಕ್ಷಣ ಇಲಾಖೆಯ ನಿಯಮಗಳ ಉಲ್ಲಂಘನೆಯಾಗಿದೆ. ಮಕ್ಕಳ ಮೇಲೆ ರಾಜಕೀಯ ಅಭಿಪ್ರಾಯಗಳನ್ನು ಹೇರುವುದು ಮತ್ತು ಅವರನ್ನು ರಾಜಕೀಯ ಪ್ರಚಾರಕ್ಕೆ ಬಳಸಿಕೊಳ್ಳುವುದು ಸರಿಯಲ್ಲ ಎಂದು ತಿಳಿಸಿದ್ದಾರೆ.

ಈ ಘಟನೆಯ ಬಗ್ಗೆ ಶಿಕ್ಷಣ ಇಲಾಖೆ ತಕ್ಷಣ ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಶಾಲೆಗಳ ಪಾವಿತ್ರ್ಯತೆ ಕಾಪಾಡುವ ನಿಟ್ಟಿನಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಕ್ರಮ ಕೈಗೊಳ್ಳಬೇಕು ಎಂದು ಕೀರ್ತನ್ ಗೌಡ ಕೊಡಪಾಲ ಆಗ್ರಹಿಸಿದ್ದಾರೆ.

- Advertisement -

Latest News

error: Content is protected !!