
ಉಡುಪಿ: ಒಣಹುಲ್ಲು ಸಾಗಿಸುತ್ತಿದ್ದ ಲಾರಿಗೆ ವಿದ್ಯುತ್ ತಂತಿ ತಗುಲಿ ಬೆಂಕಿ ಕಾಣಿಸಿಕೊಂಡ ಘಟನೆ ಬ್ರಹ್ಮಾವರ ತಾಲೂಕಿನ ಕುಂಜಾಲು ಗ್ರಾಮದ ಆರೂರು ತೆಂಕುಬೆಟ್ಟು ಎಂಬಲ್ಲಿ ನಡೆದಿದೆ. ಚಾಲಕನ ಸಮಯಪ್ರಜ್ಞೆಯಿಂದಾಗಿ ಸಂಭವಿಸಬಹುದಾಗಿದ್ದ ಭಾರಿ ಅನಾಹುತ ಹಾಗೂ ಪ್ರಾಣಾಪಾಯ ತಪ್ಪಿದೆ.
ಲಾರಿಯಲ್ಲಿ ಒಣಹುಲ್ಲಿನ ಮೂಟೆಗಳನ್ನು ತುಂಬಿಕೊಂಡು ಸಾಗಿಸುತ್ತಿದ್ದ ವೇಳೆ, ರಸ್ತೆಯ ಮೇಲೆ ಹಾದುಹೋಗಿದ್ದ ವಿದ್ಯುತ್ ತಂತಿ ಹುಲ್ಲಿಗೆ ತಗುಲಿದೆ. ಪರಿಣಾಮ ಒಣಹುಲ್ಲಿಗೆ ಏಕಾಏಕಿ ಬೆಂಕಿ ಹೊತ್ತಿಕೊಂಡಿದೆ. ತಕ್ಷಣವೇ ಎಚ್ಚೆತ್ತ ಚಾಲಕ, ಬೆಂಕಿ ಕಾಣಿಸಿಕೊಂಡಿದ್ದ ಎರಡು ಹುಲ್ಲಿನ ಮೂಟೆಗಳನ್ನು ಲಾರಿಯಿಂದ ರಸ್ತೆಗೆ ಕೆಳಗೆ ತಳ್ಳಿದ್ದಾರೆ. ಬಳಿಕ ಲಾರಿಯನ್ನು ಸಮೀಪದ ಮೈದಾನದ ಬಳಿಗೆ ಕೊಂಡೊಯ್ದು ನೀರು ಹಾಯಿಸಿ ಬೆಂಕಿ ನಂದಿಸಲು ಮುಂದಾಗಿದ್ದಾರೆ.
ಮಾಹಿತಿ ತಿಳಿದು ತಕ್ಷಣ ಸ್ಥಳಕ್ಕೆ ಧಾವಿಸಿದ ಉಡುಪಿ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ಸಂಪೂರ್ಣ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಚಾಲಕನ ಸಮಯೋಚಿತ ನಿರ್ಧಾರದಿಂದ ಇಡೀ ಲಾರಿಗೆ ಬೆಂಕಿ ವ್ಯಾಪಿಸುವುದು ತಪ್ಪಿದೆ. ಘಟನೆಯಲ್ಲಿ ಅಂದಾಜು ₹1.5 ಲಕ್ಷಕ್ಕೂ ಅಧಿಕ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.


