
ಶ್ರೀನಗರ: ಕುಲ್ಗಾಮ್‌ನ ಸಿಆರ್‌ಪಿಎಫ್ ಚೆಕ್‌ಪೋಸ್ಟ್ ಮೇಲೆ ದಾಳಿ ನಡೆಸಿ ತಲೆಮರೆಸಿಕೊಂಡಿದ್ದ ಲಷ್ಕರ್-ಎ-ತೊಯ್ಬಾ ಉಗ್ರ ಸಂಘಟನೆಯ ಕಮಾಂಡರ್ ಲತೀಫ್ ಭಟ್ ಭದ್ರತಾ ಪಡೆಗಳ ಎನ್‌ಕೌಂಟರ್‌ನಲ್ಲಿ ಹತನಾಗಿದ್ದಾನೆ.
ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ಬುಧವಾರ ಬೆಳಗ್ಗೆ ಭದ್ರತಾ ಪಡೆಗಳು ಹಾಗೂ ಉಗ್ರರ ನಡುವೆ ಗುಂಡಿನ ಚಕಮಕಿ ನಡೆದಿದೆ. ಈ ವೇಳೆ ಮಸೀದಿಯೊಂದರಲ್ಲಿ ಅಡಗಿದ್ದ ಲತೀಫ್ ಭಟ್‌ನನ್ನು ಭದ್ರತಾ ಪಡೆಗಳು ಸುತ್ತುವರಿದಿದ್ದವು. ಪೊಲೀಸರು ವಿಡಿಯೋ ಕರೆ ಮೂಲಕ ಆತನನ್ನು ಶರಣಾಗುವಂತೆ ಮನವಿ ಮಾಡಿದರು. ಆದರೆ ಆತ ಶರಣಾಗಲು ನಿರಾಕರಿಸಿದ ಹಿನ್ನೆಲೆಯಲ್ಲಿ ಭದ್ರತಾ ಪಡೆಗಳು ಕಾರ್ಯಾಚರಣೆ ನಡೆಸಿ ಆತನನ್ನು ಹತ್ಯೆಗೈದಿವೆ.
ಮಸೀದಿಯಲ್ಲಿ ಅಡಗಿದ್ದ ಲತೀಫ್ ಭಟ್‌ನನ್ನು ಶರಣಾಗುವಂತೆ ಮಾಡಲು ಪೊಲೀಸರು ವಿಡಿಯೋ ಕರೆ ಮೂಲಕ ಪ್ರಯತ್ನಿಸಿದ್ದರು. ಈ ವೇಳೆ ಅಧಿಕಾರಿಯೊಬ್ಬರು, “ನಾವು ನಿನ್ನೊಂದಿಗಿದ್ದೇವೆ” ಎಂದು ಧೈರ್ಯ ತುಂಬಿದ್ದರು. ಆದರೆ ಇದಕ್ಕೆ ಪ್ರತಿಕ್ರಿಯಿಸಿದ ಲತೀಫ್, “ನಾನು ಅಲ್ಲಾಹನನ್ನು ಭೇಟಿಯಾಗಬೇಕು, ನನಗೆ ತುಂಬಾ ಸಂತೋಷವಾಗಿದೆ” ಎಂದು ಹೇಳಿ ಶರಣಾಗಲು ನಿರಾಕರಿಸಿದ್ದಾನೆ.
ಇನ್ನು ಲತೀಫ್ ಭಟ್‌ನ ಸಹಚರ ಉಮರ್ ನಿಸಾರ್ ದಾರ್ ಸೋಮವಾರ ಕುಲ್ಗಾಮ್‌ನಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಹತನಾಗಿದ್ದಾನೆ. ನವೆಂಬರ್ 11ರಂದು ಸಿಆರ್‌ಪಿಎಫ್ ಚೆಕ್‌ಪೋಸ್ಟ್ ಮೇಲೆ ದಾಳಿ ನಡೆಸುವ ಮೊದಲು ಲತೀಫ್ ಭಟ್ ಮತ್ತು ಉಮರ್ ದಾರ್ ಸ್ಥಳ ಪರಿಶೀಲನೆ ನಡೆಸುತ್ತಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದವು. ಈ ವಿಡಿಯೋವನ್ನು ಪೊಲೀಸರು ಮಂಗಳವಾರ ಬಿಡುಗಡೆ ಮಾಡಿದ್ದಾರೆ. ನವೆಂಬರ್ 11ರಂದು ನಡೆದ ದಾಳಿಯಲ್ಲಿ ಮೂವರು ಸಿಆರ್‌ಪಿಎಫ್ ಸಿಬ್ಬಂದಿ ಗಾಯಗೊಂಡಿದ್ದರು.


