ಕಡಬ: ಬಿಸಿಲೆ ಘಾಟ್ನಲ್ಲಿ ಯುವತಿಯೊಬ್ಬಳ ಮೇಲೆ ಕಬ್ಬಿಣದ ರಾಡ್ನಿಂದ ಹಲ್ಲೆ ನಡೆಸಿ ಕೊಲೆ ಮಾಡಲು ಯತ್ನಿಸಿದ ಆರೋಪದ ಮೇಲೆ ಪ್ರಸಾದ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿ ಕಡಬದ ಕೊಣಾಜೆ ಗ್ರಾಮದ ನಿವಾಸಿ ಎಂದು ತಿಳಿದುಬಂದಿದೆ.
ಪೊಲೀಸರ ಮಾಹಿತಿ ಪ್ರಕಾರ, ಆರೋಪಿ ಪ್ರಸಾದ್ ಮತ್ತು ಸಂತ್ರಸ್ತ ಯುವತಿ ಕಳೆದ ಮೂರು ವರ್ಷಗಳಿಂದ ಪರಿಚಯ ಹೊಂದಿದ್ದರು. ನವೆಂಬರ್ 4ರಂದು ಸಂಜೆ ಪ್ರಸಾದ್, ಯುವತಿಯನ್ನು ಉಪ್ಪಿನಂಗಡಿಯಿಂದ ತನ್ನ ಕಾರಿನಲ್ಲಿ ಕರೆದುಕೊಂಡು ಹೋಗಿದ್ದ. ಕುಲ್ಕುಂದ ಮಾರ್ಗವಾಗಿ ಬಿಸಿಲೆ ಘಾಟ್ಗೆ ತೆರಳುತ್ತಿದ್ದ ವೇಳೆ ರಾತ್ರಿ ದಾರಿಮಧ್ಯೆ ಕಬ್ಬಿಣದ ರಾಡ್ನಿಂದ ಯುವತಿಯ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಲು ಯತ್ನಿಸಿದ್ದಾನೆ ಎನ್ನಲಾಗಿದೆ.
ಹಲ್ಲೆಯಿಂದ ಯುವತಿ ಪ್ರಜ್ಞೆ ತಪ್ಪಿ ಬಿದ್ದಿದ್ದರು. ನವೆಂಬರ್ 5ರಂದು ಬೆಳಿಗ್ಗೆ ಪ್ರಜ್ಞೆ ಮರಳಿದ ಬಳಿಕ ಸುಬ್ರಹ್ಮಣ್ಯಕ್ಕೆ ತೆರಳಿ ಆಸ್ಪತ್ರೆಗೆ ದಾಖಲಾಗಿದ್ದರು.
ಯುವತಿಯ ದೂರಿನ ಆಧಾರದ ಮೇಲೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಬಿಎನ್ಎಸ್ 2023ರ ಸೆಕ್ಷನ್ 118(1) ಮತ್ತು 109(1)ರ ಅಡಿಯಲ್ಲಿ ಶೂನ್ಯ ಎಫ್ಐಆರ್ ದಾಖಲಿಸಲಾಗಿತ್ತು. ಘಟನೆ ನಡೆದ ಸ್ಥಳ ಹಾಸನ ಜಿಲ್ಲೆಯ ವ್ಯಾಪ್ತಿಗೆ ಬರುವುದರಿಂದ ಪ್ರಕರಣವನ್ನು ಯೆಸಳೂರು ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ.
ಸುಬ್ರಹ್ಮಣ್ಯ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ಮುಂದಿನ ಕಾನೂನು ಕ್ರಮಕ್ಕಾಗಿ ಯೆಸಳೂರು ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.


