ಉಡುಪಿ: ಆಂಧ್ರಪ್ರದೇಶ ಮೂಲದ ಅಗ್ರಿಗೋಲ್ಡ್ ಸಂಸ್ಥೆಯ ಕೋಟ್ಯಂತರ ರೂಪಾಯಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಹೂಡಿಕೆ ಮಾಡಿದ ಹಣ ವಾಪಸ್ ಸಿಗಲಿದೆ ಎಂಬ ವದಂತಿ ಹರಡಿದ ಹಿನ್ನೆಲೆಯಲ್ಲಿ ನೂರಾರು ಸಂತ್ರಸ್ತರು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಕಚೇರಿಗೆ ಆಗಮಿಸಿದರು.
ಅಗ್ರಿಗೋಲ್ಡ್ ಸಂಸ್ಥೆಯಲ್ಲಿ ಹಣ ಹೂಡಿಕೆ ಮಾಡಿ ಕಳೆದುಕೊಂಡವರ ದಾಖಲೆಗಳನ್ನು ಎಸ್ಪಿ ಕಚೇರಿಯಲ್ಲಿ ಸಂಗ್ರಹಿಸಲಾಗುತ್ತಿದೆ. ಪ್ರತಿದಿನ 150 ಮಂದಿಯ ದಾಖಲೆಗಳನ್ನು ಪಡೆಯಲು ಟೋಕನ್ ವ್ಯವಸ್ಥೆ ಮಾಡಲಾಗಿದೆ. ಆದರೆ, ಹಣ ವಾಪಸ್ ಸಿಗಲಿದೆ ಎಂಬ ಸುದ್ದಿ ಹರಡುತ್ತಿದ್ದಂತೆ ಮಹಿಳೆಯರು ಸೇರಿದಂತೆ ನೂರಾರು ಸಂತ್ರಸ್ತರು ಕಚೇರಿಗೆ ಧಾವಿಸಿದರು.
ಒಂದೇ ದಿನ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಿದ್ದರಿಂದ ಟೋಕನ್ ಪಡೆಯಲು ಗೊಂದಲ ಉಂಟಾಯಿತು. ನಮಗೂ ಟೋಕನ್ ನೀಡಿ ಎಂದು ಮಹಿಳಾ ಸಂತ್ರಸ್ತರು ಪೊಲೀಸ್ ಅಧಿಕಾರಿಗಳನ್ನು ಒತ್ತಾಯಿಸಿದರು. ಈ ವೇಳೆ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಿ, ದಾಖಲೆ ಸಂಗ್ರಹ ಪ್ರಕ್ರಿಯೆಯ ಬಗ್ಗೆ ಸಂತ್ರಸ್ತರಿಗೆ ಮನವರಿಕೆ ಮಾಡಲು ಪ್ರಯತ್ನಿಸಿದರು.
ಅಗ್ರಿಗೋಲ್ಡ್ನಲ್ಲಿ ಹಣ ಕಳೆದುಕೊಂಡವರಲ್ಲಿ ಮಹಿಳೆಯರ ಸಂಖ್ಯೆಯೂ ಹೆಚ್ಚಾಗಿದೆ. ತಮ್ಮ ಹೂಡಿಕೆಯ ಹಣ ಮರಳಿ ಸಿಗಬಹುದು ಎಂಬ ನಿರೀಕ್ಷೆಯಿಂದ ಅನೇಕರು ಎಸ್ಪಿ ಕಚೇರಿಗೆ ಆಗಮಿಸಿದ್ದರು. ಆದರೆ, ಹಣ ವಾಪಸಾತಿ ಕುರಿತು ಹರಡಿದ ವದಂತಿಯಿಂದ ಸಂತ್ರಸ್ತರಲ್ಲಿ ಗೊಂದಲ ಉಂಟಾಗಿತ್ತು.


