ಕೇರಳದ ಕೋಝಿಕ್ಕೋಡ್‌ನ ಪೆರುವಾಯಲ್‌ನಲ್ಲಿ ಕಳೆದ ವರ್ಷ ಅಕ್ಟೋಬರ್‌ನಲ್ಲಿ ಸಂಭವಿಸಿದ್ದ ನಾಲ್ಕು ತಿಂಗಳ ಹಸುಳೆಯ ಸಾವು ನೈಸರ್ಗಿಕವಲ್ಲ, ಅದೊಂದು ಭೀಕರ ಕೊಲೆ ಎಂಬ ಆಘಾತಕಾರಿ ಸತ್ಯ ತನಿಖೆಯಿಂದ ಬಯಲಾಗಿದೆ. ರಾತ್ರಿ ವೇಳೆ ಮಗು ನಿರಂತರವಾಗಿ ಅಳುತ್ತಿದ್ದರಿಂದ ಆಕ್ರೋಶಗೊಂಡ ಮದ್ಯವ್ಯಸನಿ ತಂದೆಯೇ ಹಸುಳೆಯನ್ನು ಹೊಡೆದು ಕೊಂದಿರುವುದು ಪೊಲೀಸ್ ತನಿಖೆಯಲ್ಲಿ ದೃಢಪಟ್ಟಿದೆ.
ಈ ಅಮಾನವೀಯ ಕೃತ್ಯಕ್ಕೆ ಸಂಬಂಧಿಸಿದಂತೆ ಕುಟ್ಟಿಕ್ಕತ್ತೂರಿನ ವಯಲ್ಕರ ಮೂಲದ ತಂದೆ ಶಿಜಿನ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಜೊತೆಗೆ, ಪತಿಯ ಕೊಲೆ ಕೃತ್ಯವನ್ನು ಮುಚ್ಚಿಹಾಕಲು ಸಹಕರಿಸಿದ ಮಗುವಿನ ತಾಯಿ ಅಂಜನಾಳನ್ನೂ ಸಹ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಈ ಕೃತ್ಯವು ಅಕ್ಟೋಬರ್ 1, 2025ರಂದು ನಡೆದಿತ್ತು. ಅಂದು ರಾತ್ರಿ ಮಗು ಎಚ್ಚರಗೊಳ್ಳುತ್ತಿಲ್ಲ ಹಾಗೂ ಮೂಗಿನಿಂದ ಕಪ ಬರುತ್ತಿದೆ ಎಂದು ಕಥೆ ಕಟ್ಟಿದ್ದ ಶಿಜಿನ್ ಮತ್ತು ಅಂಜನಾ ದಂಪತಿ ಹಸುಳೆಯನ್ನು ಸ್ಥಳೀಯ ಆಸ್ಪತ್ರೆಗೆ ಕರೆತಂದಿದ್ದರು. ಮಗುವಿನ ಸ್ಥಿತಿ ಗಂಭೀರವಾಗಿದ್ದರಿಂದ ತಕ್ಷಣವೇ ಕೋಝಿಕ್ಕೋಡ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಿಸದೆ ಮಗು ಮೃತಪಟ್ಟಿತ್ತು.
ಆರಂಭದಲ್ಲಿ ಇದೊಂದು ಸಹಜ ಸಾವು ಎಂದು ಬಿಂಬಿಸಲು ದಂಪತಿ ಯತ್ನಿಸಿದ್ದರು. ಆದರೆ, ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಮಗುವಿನ ದೇಹದ ಮೇಲೆ ತೀವ್ರ ಹಲ್ಲೆಯ ಗುರುತುಗಳು ಪತ್ತೆಯಾಗಿದ್ದವು. ಇದು ಸಹಜ ಸಾವಲ್ಲ, ಬದಲಿಗೆ ಹಲ್ಲೆಯಿಂದ ನಡೆದ ಕೊಲೆ ಎಂದು ವೈದ್ಯರು ಸ್ಪಷ್ಟಪಡಿಸಿದ್ದರು.
ಮರಣೋತ್ತರ ಪರೀಕ್ಷೆಯ ವರದಿ ಬಂದಿದ್ದರೂ ತಾಯಿ ಅಂಜನಾ ಆರಂಭದಲ್ಲಿ ಘಟನೆಯ ಕುರಿತು ಬಾಯಿ ಬಿಡದೆ ಮೌನ ವಹಿಸಿದ್ದರು. ಆದರೆ, ಸ್ಥಳೀಯರ ಅನುಮಾನ ಹಾಗೂ ಸಾರ್ವಜನಿಕರ ತೀವ್ರ ಒತ್ತಡದಿಂದಾಗಿ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಆಕೆಯನ್ನು ಸುದೀರ್ಘ ವಿಚಾರಣೆಗೆ ಒಳಪಡಿಸಿದರು. ಪೊಲೀಸರ ಖಡಕ್ ವಿಚಾರಣೆಯ ವೇಳೆ ಸತ್ಯ ಬಾಯ್ಬಿಟ್ಟ ಅಂಜನಾ, “ರಾತ್ರಿ ಮಗು ಅಳು ನಿಲ್ಲಿಸದಿದ್ದಕ್ಕೆ ಮದ್ಯದ ಅಮಲಿನಲ್ಲಿದ್ದ ಶಿಜಿನ್ ಮಗುವಿನ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿ ಕೊಂದಿದ್ದಾನೆ” ಎಂದು ತಪ್ಪೊಪ್ಪಿಕೊಂಡಿದ್ದಾರೆ.
ತಪ್ಪೊಪ್ಪಿಗೆ ಆಧಾರದ ಮೇಲೆ ಪೊಲೀಸರು ಶಿಜಿನ್ ವಿರುದ್ಧ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಪರಾಧವನ್ನು ಮುಚ್ಚಿಹಾಕಿ, ಸಾಕ್ಷ್ಯ ನಾಶಕ್ಕೆ ಯತ್ನಿಸಿದ ಹಿನ್ನೆಲೆಯಲ್ಲಿ ತಾಯಿ ಅಂಜನಾಳ ವಿರುದ್ಧವೂ ಕಾನೂನು ಕ್ರಮ ಜರುಗಿಸಿ ಬಂಧಿಸಲಾಗಿದೆ.


