Sunday, October 25, 2026
Homeಕರಾವಳಿಮಂಗಳೂರುಬಂಟ್ವಾಳ: ವಗ್ಗದ ಸರ್ಕಾರಿ ವಸತಿಗೃಹದಲ್ಲಿ ಶುಶ್ರೂಷಾಧಿಕಾರಿ ಸಾವು; ಪತಿ ಹಲ್ಲೆ ನಡೆಸಿ ಕೊಲೆ ಮಾಡಿರುವ ಶಂಕೆ

ಬಂಟ್ವಾಳ: ವಗ್ಗದ ಸರ್ಕಾರಿ ವಸತಿಗೃಹದಲ್ಲಿ ಶುಶ್ರೂಷಾಧಿಕಾರಿ ಸಾವು; ಪತಿ ಹಲ್ಲೆ ನಡೆಸಿ ಕೊಲೆ ಮಾಡಿರುವ ಶಂಕೆ

- Advertisement -
- Advertisement -

ಬಂಟ್ವಾಳ: ತಾಲೂಕಿನ ಕಾವಳಪಡೂರು ಗ್ರಾಮದ ವಗ್ಗದಲ್ಲಿರುವ ಸರ್ಕಾರಿ ವಸತಿಗೃಹದಲ್ಲಿ ಮಹಿಳೆಯೊಬ್ಬರು ಮೃತಪಟ್ಟಿ[ಕಾರು/ಘಟನೆ] ಸಂಭವಿಸಿದ್ದು, ಹಣದ ವಿಚಾರವಾಗಿ ಪತಿಯೇ ಹಲ್ಲೆ ನಡೆಸಿ ಕೊಲೆ ಮಾಡಿದ್ದಾನೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ತೇಲಸಂಗ ಗ್ರಾಮದ ಸುನೀತಾ ಮಹಾದೇವ್ ದೇಸಂಗಿ (34) ಮೃತ ದುರ್ದೈವಿ. ಇವರು ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಶುಶ್ರೂಷಾಧಿಕಾರಿಯಾಗಿ (ನರ್ಸ್) ಸೇವೆ ಸಲ್ಲಿಸುತ್ತಿದ್ದರು. ಮೃತರ ಪತಿ ಸಂಜೀವಕುಮಾರ್ (36) ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಗದ್ಯಾಳ ಗ್ರಾಮದವರಾಗಿದ್ದು, ವಗ್ಗದಲ್ಲಿ ಗುತ್ತಿಗೆ ಆಧಾರದಲ್ಲಿ ಸಮುದಾಯ ಆರೋಗ್ಯ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಘಟನೆಯ ಹಿನ್ನೆಲೆ: ಸುನೀತಾ ಅವರ ಮಾಸಿಕ ವೇತನದ ಹಣವನ್ನು ತನಗೆ ನೀಡುವಂತೆ ಪತಿ ಸಂಜೀವಕುಮಾರ್ ಆಗಾಗ ತಕರಾರು ತೆಗೆದು ಹಲ್ಲೆ ನಡೆಸುತ್ತಿದ್ದರು ಎನ್ನಲಾಗಿದೆ. ಈ ಹಿಂದೆ ಈ ವಿಚಾರವಾಗಿ ಎರಡೂ ಕುಟುಂಬಗಳ ನಡುವೆ ರಾಜಿ ಸಂಧಾನ ಕೂಡ ನಡೆದಿತ್ತು.

ಅಕ್ಟೋಬರ್ 22ರ ರಾತ್ರಿ ಸುನೀತಾ ಅವರು ತಮ್ಮ ಸಹೋದರ ಅರುಣ್ ಮಹಾದೇವ್ ದೇಸಂಗಿ ಅವರಿಗೆ ಕರೆ ಮಾಡಿ, ಪತಿ ಹಣದ ವಿಚಾರದಲ್ಲಿ ಮತ್ತೆ ಕಿರುಕುಳ ನೀಡುತ್ತಿದ್ದು ಹಲ್ಲೆ ಮಾಡುತ್ತಿದ್ದಾರೆ ಎಂದು ಅಳಲು ತೋಡಿಕೊಂಡು ತಕ್ಷಣ ಬರುವಂತೆ ತಿಳಿಸಿದ್ದರು. ಬಳಿಕ ಅಕ್ಟೋಬರ್ 23ರ ಮುಂಜಾನೆ ಸಂಜೀವಕುಮಾರ್ ಅವರ ಮೊಬೈಲ್‌ನಿಂದಲೇ ಕರೆ ಮಾಡಿದ ವ್ಯಕ್ತಿಗಳು, ಸುನೀತಾ ಮಂಚದಿಂದ ಬಿದ್ದು ಪ್ರಜ್ಞೆ ತಪ್ಪಿದ್ದಾರೆ ಎಂದು ತಿಳಿಸಿ ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದರು.

ಮೃತದೇಹದಲ್ಲಿದ್ದ ಗಾಯಗಳು ಹಾಗೂ ಕುಟುಂಬದವರ ಆಕ್ರೋಶ: ಸಹೋದರ ಅರುಣ್ ಹಾಗೂ ತಾಯಿ ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ತೆರಳಿ ವಿಚಾರಿಸಿದಾಗ, ಮುಂಜಾನೆ 4.30ರ ವೇಳೆಗೆ ಆಸ್ಪತ್ರೆಗೆ ತರುವಷ್ಟರಲ್ಲೇ ಸುನೀತಾ ಮೃತಪಟ್ಟಿರುವುದು ತಿಳಿದುಬಂದಿದೆ. ಶವಾಗಾರದಲ್ಲಿದ್ದ ಮೃತದೇಹವನ್ನು ಪರಿಶೀಲಿಸಿದಾಗ ಹಣೆ, ಕುತ್ತಿಗೆ ಹಾಗೂ ತಲೆಯ ಭಾಗದಲ್ಲಿ ಗಾಯಗಳು ಮತ್ತು ಊತ ಕಂಡುಬಂದಿದ್ದು, ಮೂಗು ಹಾಗೂ ಬಾಯಿಯಿಂದ ರಕ್ತ ಬಂದಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ವೇತನದ ಹಣದ ವಿಚಾರದಲ್ಲಿ ಉಂಟಾದ ತಕರಾರಿನ ಹಿನ್ನೆಲೆಯಲ್ಲಿ ಪತಿ ಸಂಜೀವಕುಮಾರ್ ಮಾರಕಾಸ್ತ್ರದಿಂದ ಹಲ್ಲೆ ನಡೆಸಿ ಪತ್ನಿಯನ್ನು ಕೊಲೆ ಮಾಡಿದ್ದಾನೆ ಎಂದು ಸಹೋದರ ಅರುಣ್ ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನಲ್ಲಿರುವ ಆರೋಪಗಳು ಪೊಲೀಸ್ ತನಿಖೆಯಿಂದಷ್ಟೇ ದೃಢಪಡಬೇಕಿದೆ.

ಮೃತ ಸುನೀತಾ ಅವರಿಗೆ ಮೂರು ವರ್ಷದ ಹಾಗೂ ಕೇವಲ ಮೂರು ತಿಂಗಳ ಇಬ್ಬರು ಗಂಡು ಮಕ್ಕಳಿದ್ದು, ತಾಯಿ ಕಳೆದುಕೊಂಡು ಮಕ್ಕಳು ಅನಾಥರಾಗಿದ್ದಾರೆ. ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಕುರಿತು ತನಿಖೆ ಮುಂದುವರಿದಿದೆ.

- Advertisement -

Latest News

error: Content is protected !!