ಮಂಗಳೂರು: ನಗರದ ಸುಲ್ತಾನ್ ಬತೇರಿ ಸಮೀಪದ ‘ಎಡ್ಜ್ ವಾಟರ್’ ಬಳಿ ಇತ್ತೀಚೆಗೆ ಆಯೋಜಿಸಲಾಗಿದ್ದ ‘ದಾಂಡಿಯ ನೈಟ್ಸ್’ ಕಾರ್ಯಕ್ರಮದಲ್ಲಿ ಅಸಭ್ಯ ನೃತ್ಯಗಳನ್ನು ಪ್ರದರ್ಶಿಸಲಾಗಿದೆ ಎಂದು ಆರೋಪಿಸಿ, ವಿಶ್ವಹಿಂದೂ ಪರಿಷತ್ಹಾಗೂ ದುರ್ಗಾವಾಹಿನಿ ಮಹಿಳಾ ಸಂಘಟನೆಯ ಕಾರ್ಯಕರ್ತರು ಮಂಗಳೂರಿನ ಬರ್ಕೆ ಪೊಲೀಸ್ ಠಾಣೆಗೆ ಅಧಿಕೃತವಾಗಿ ದೂರು ದಾಖಲಿಸಿದ್ದಾರೆ.
ಈ ಕಾರ್ಯಕ್ರಮದ ಆಯೋಜಕಿ, ಕರ್ನಾಟಕ ಎಕೋ ಟೂರಿಸಂ ಬೋರ್ಡ್ ಅಧ್ಯಕ್ಷೆ ಹಾಗೂ ಕಾಂಗ್ರೆಸ್ ಮುಖಂಡೆ ಶಾಲೆಟ್ ಪಿಂಟೋ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಆಗ್ರಹಿಸಲಾಗಿದೆ.
ದೂರಿನಲ್ಲಿ ಏನಿದೆ?
ಅಕ್ಟೋಬರ್ 18, 2026 ರಂದು ಭಾನುವಾರದಂದು ಸುಲ್ತಾನ್ ಬತೇರಿಯ ‘ಎಡ್ಜ್ ವಾಟರ್’ ಎಂಬಲ್ಲಿ ‘Shalet Pinto Presents Dandiya Night 2.0 – On Occasion of Navratri’ ಹೆಸರಿನಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಶಾಲೆಟ್ ಪಿಂಟೋ ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ, ಪವಿತ್ರ ನವರಾತ್ರಿ ಉತ್ಸವದ ಹೆಸರಿನಲ್ಲಿ ಅಸಭ್ಯ ನೃತ್ಯಗಳು ಹಾಗೂ ಪಾಶ್ಚಿಮಾತ್ಯ ಅಶ್ಲೀಲ ಹಾಡುಗಳಿಗೆ ಕುಣಿದು, ಧಾರ್ಮಿಕ ಆಚರಣೆಗಳಿಗೆ ಧಕ್ಕೆ ತರಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಅಲ್ಲದೆ, ಇದಕ್ಕೆ ಸಂಬಂಧಿಸಿದ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಹಿಂದೂ ಧರ್ಮೀಯರ ಧಾರ್ಮಿಕ ಭಾವನೆಗಳಿಗೆ ತೀವ್ರ ನೋವುಂಟು ಮಾಡಿದೆ ಎಂದು ಸಂಘಟನೆಯ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ, ಕಾರ್ಯಕ್ರಮದ ಆಯೋಜಕರಾದ ಶಾಲೆಟ್ ಪಿಂಟೋ ಹಾಗೂ ಸಂಬಂಧಪಟ್ಟವರ ವಿರುದ್ಧ ತಕ್ಷಣವೇ ಎಫ್.ಐ.ಆರ್ ದಾಖಲಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದುರ್ಗಾವಾಹಿನಿ ಮಂಗಳೂರು ಸಂಚಾಲಕಿ ತುಳಸಿ ಎಸ್. ಕುಂದನ್ ಹಾಗೂ ಸಹ ಸಂಚಾಲಕಿ ಚೇತನ ಅವರು ಪೊಲೀಸರಿಗೆ ಮನವಿ ಮಾಡಿದ್ದಾರೆ.


