ಬಂಟ್ವಾಳ: ಸಾಲವಾಗಿ ನೀಡಿದ್ದ ಹಣವನ್ನು ವಾಪಸ್ ಕೇಳಿದ ವಿಚಾರಕ್ಕೆ ವ್ಯಕ್ತಿಯೊಬ್ಬರಿಗೆ ಚೂರಿಯಿಂದ ಇರಿದು ಕೊಲೆಗೆ ಯತ್ನಿಸಿದ ಘಟನೆ ಬಂಟ್ವಾಳದ ಬಿ.ಮೂಡ ಗ್ರಾಮದ ಪಲ್ಲಮಜಲಿನಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಅಜಿತ್ ಕುಮಾರ್ ಶೆಟ್ಟಿ (28) ಎಂಬಾತನನ್ನು ಬಂಟ್ವಾಳ ನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬಿ.ಮೂಡ ಗ್ರಾಮದ ನಿವಾಸಿ ಉದಯ್ ಇರಿತಕ್ಕೊಳಗಾದ ವ್ಯಕ್ತಿ. ಅವರ ಸಹೋದರ ಲೋಕೇಶ್ (27) ನೀಡಿದ ದೂರಿನ ಪ್ರಕಾರ, ಉದಯ್ ಅವರು ಅಜಿತ್ನಿಂದ ಹಣ ಪಡೆಯಬೇಕಿತ್ತು. ಹಣ ವಾಪಸ್ ನೀಡುವಂತೆ ಉದಯ್ ಕೇಳುತ್ತಿದ್ದ ಹಿನ್ನೆಲೆಯಲ್ಲಿ, ಅ.17ರಂದು ರಾತ್ರಿ ಹಣ ನೀಡುವುದಾಗಿ ತಿಳಿಸಿದ ಅಜಿತ್, ಪಲ್ಲಮಜಲಿಗೆ ಬರುವಂತೆ ಹೇಳಿದ್ದ ಎನ್ನಲಾಗಿದೆ.
ಅದರಂತೆ ಉದಯ್ ಹಣ ಪಡೆಯಲು ಪಲ್ಲಮಜಲು ಜಂಕ್ಷನ್ಗೆ ತೆರಳಿದ್ದರು. ತಮ್ಮ ಸಹೋದರ ಲೋಕೇಶ್ ಅವರಿಗೂ ಅಲ್ಲಿಗೆ ಬರುವಂತೆ ತಿಳಿಸಿದ್ದರು. ಲೋಕೇಶ್ ಸ್ಥಳಕ್ಕೆ ತಲುಪಿದಾಗ ಅಜಿತ್ ಚೂರಿಯಿಂದ ಉದಯ್ಗೆ ಇರಿಯುತ್ತಿರುವುದು ಕಂಡುಬಂದಿದೆ. ಈ ವೇಳೆ ತಡೆಯಲು ಮುಂದಾದ ಲೋಕೇಶ್ ಅವರನ್ನೂ ಆರೋಪಿ ಅಟ್ಟಿಸಿಕೊಂಡು ಬಂದಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಗಾಯಗೊಂಡ ಉದಯ್ ಅವರನ್ನು ಸ್ಥಳೀಯರು ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಈ ಸಂಬಂಧ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಅಜಿತ್ ಕುಮಾರ್ ಶೆಟ್ಟಿಯನ್ನು ವಶಕ್ಕೆ ಪಡೆದಿರುವ ಪೊಲೀಸರು, ಹೆಚ್ಚಿನ ವಿಚಾರಣೆ ನಡೆಸಿ ನ್ಯಾಯಾಲಯಕ್ಕೆ ಹಾಜರುಪಡಿಸುವುದಾಗಿ ತಿಳಿಸಿದ್ದಾರೆ.


