ಉಡುಪಿ: ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದ ಎರಡು ವರ್ಷಗಳಲ್ಲಿ ಪತ್ತೆಯಾಗಿದ್ದ ಅಪರಿಚಿತ ಮೃತದೇಹಗಳ ಮರಣೋತ್ತರ ಪರೀಕ್ಷೆಯ ಬಳಿಕ ಸಂರಕ್ಷಿಸಲಾಗಿದ್ದ ಅಂಗಾಂಗಗಳನ್ನು ಕಾನೂನು ಪ್ರಕ್ರಿಯೆ ಪೂರ್ಣಗೊಳಿಸಿ ಬೀಡಿನಗುಡ್ಡೆ ದಫನಭೂಮಿಯಲ್ಲಿ ದಫನ ಮಾಡಲಾಯಿತು.
ವಿವಿಧ ಸಾರ್ವಜನಿಕ ಸ್ಥಳಗಳಲ್ಲಿ ಪತ್ತೆಯಾದ ಅಪರಿಚಿತ ಮೃತದೇಹಗಳ ಅಂಗಾಂಗಗಳನ್ನು ಮರಣೋತ್ತರ ಹಾಗೂ ವಿಧಿವಿಜ್ಞಾನ ಪರೀಕ್ಷೆಗಾಗಿ ಪರೀಕ್ಷಾ ಕೇಂದ್ರಗಳಿಗೆ ಕಳುಹಿಸಲಾಗಿತ್ತು. ಪರೀಕ್ಷೆಯಲ್ಲಿ ಸಹಜ ಸಾವು ಎಂದು ದೃಢಪಟ್ಟ ಬಳಿಕ, ರಾಸಾಯನಿಕ ದ್ರಾವಣದಲ್ಲಿ ಸಂರಕ್ಷಿಸಲಾಗಿದ್ದ ಅಂಗಾಂಗಗಳನ್ನು ಹಲವು ಡಬ್ಬಿಗಳಲ್ಲಿ ಮಲ್ಪೆ ಪೊಲೀಸ್ ಠಾಣೆಗೆ ಹಿಂತಿರುಗಿಸಲಾಗಿತ್ತು. ಕಾನೂನು ಪ್ರಕ್ರಿಯೆ ಪೂರ್ಣಗೊಳಿಸಿದ ಬಳಿಕ ಜೆಸಿಬಿ ಯಂತ್ರದ ನೆರವಿನಿಂದ ಅಂಗಾಂಗಗಳನ್ನು ದಫನ ಮಾಡಲಾಯಿತು. ಸಂಬಂಧಪಟ್ಟ ಮೃತದೇಹಗಳ ದಫನ ಕಾರ್ಯವನ್ನು ಈ ಹಿಂದೆಯೇ ನಡೆಸಲಾಗಿತ್ತು.
ಮಲ್ಪೆ ಪೊಲೀಸ್ ಠಾಣೆಯ ಎಸ್ಐ ಅನಿಲ್, ಎಎಸ್ಐ ಹರೀಶ್ ಹಾಗೂ ಮುಖ್ಯ ಆರಕ್ಷಕಿ ಸಿಂಚನ ಕಾನೂನು ಪ್ರಕ್ರಿಯೆಗಳನ್ನು ನೆರವೇರಿಸಿದರು. ಸಮಾಜಸೇವಕ ನಿತ್ಯಾನಂದ ಒಳಕಾಡು ದಫನ ಕಾರ್ಯಕ್ಕೆ ನೆರವು ನೀಡಿದ್ದು, ಶಬ್ಬೀರ್ ಮುಸ್ತಾಕ್ ಸಹಕಾರ ನೀಡಿದರು.


