ಉಪ್ಪಿನಂಗಡಿ : 3 ದಿನಗಳ ಹಿಂದೆ ಕುಮಾರಧಾರ ನದಿಯ ಹಳೆ ಸೇತುವೆ ಮೇಲೆ ಬೈಕ್ ಹಾಗೂ ಮೊಬೈಲ್ ಇಟ್ಟು ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹ ಸೋಮವಾರ 34 ನೆಕ್ಕಿಲಾಡಿ ಗ್ರಾಮದ ಬೊಳ್ಳಾರ್ ಎಂಬಲ್ಲಿ ನೇತ್ರಾವತಿ ನದಿಯಲ್ಲಿ ಪತ್ತೆಯಾಗಿದೆ. ಹಿರೇಬಂಡಾಡಿ ಗ್ರಾಮದ ಪೆರಾಬೆ ನಿವಾಸಿ ಮಾಧವ ಗೌಡ (44) ಮೃತಪಟ್ಟವರು.
ಆತೂರಿನಲ್ಲಿ ಇತ್ತೀಚೆಗಷ್ಟೇ ಟಯರ್ ಪಂಕ್ಚರ್ ಅಂಗಡಿ ಆರಂಭಿಸಿದ್ದ ಮಾಧವ ಗೌಡ ಅವರು ಅಕ್ಟೋಬರ್ 2 ರಂದು ಅಂಗಡಿಗೆ ತೆರಳಿದವರು ರಾತ್ರಿಯಾದರೂ ಮನೆಗೆ ಹಿಂತಿರುಗಿರಲಿಲ್ಲ. ಬಳಿಕ ಪರಿಶೀಲಿಸಿದಾಗ ಕುಮಾರಧಾರ ನದಿಯ ಹಳೆ ಸೇತುವೆ ಮೇಲೆ ಅವರ ಬೈಕ್ ಮತ್ತು ಮೊಬೈಲ್ ಸಿಕ್ಕಿತ್ತು.
ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಶಂಕೆಯಿಂದ ಅಗ್ನಿಶಾಮಕ ಸಿಬ್ಬಂದಿ ಹಾಗೂ ಮುಳುಗುತಜ್ಞರು ನದಿ ಸಂಗಮ ಕ್ಷೇತ್ರದಲ್ಲಿ ಶೋಧ ನಡೆಸಿದ್ದರು. ಸೋಮವಾರ ಬೊಳ್ಳಾರ್ ಬಳಿ ನೇತ್ರಾವತಿ ನದಿಯಲ್ಲಿ ಮೃತದೇಹ ತಲಾಂತು ಬರುವುದು ಕಂಡುಬಂದಿದ್ದು, ಪರಿಶೀಲಿಸಿದಾಗ ಅದು ಮಾಧವ ಗೌಡರ ಶವ ಎಂಬುದು ದೃಢಪಟ್ಟಿದೆ.


