Monday, September 28, 2026
Homeಕರಾವಳಿದೋಷಪೂರಿತ ಎಸ್‌ಐಆರ್ ರದ್ದುಪಡಿಸಿ: ಪ್ರತಿರೋಧ ಸಂಘಟನೆಯ ಮುಖಂಡ ಪ್ರಕಾಶ್ ರಾಜ್ ಆಗ್ರಹ

ದೋಷಪೂರಿತ ಎಸ್‌ಐಆರ್ ರದ್ದುಪಡಿಸಿ: ಪ್ರತಿರೋಧ ಸಂಘಟನೆಯ ಮುಖಂಡ ಪ್ರಕಾಶ್ ರಾಜ್ ಆಗ್ರಹ

- Advertisement -
- Advertisement -

ಮಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ದೋಷಪೂರಿತ ಎಸ್‌ಐಆರ್ ಪ್ರಕ್ರಿಯೆಯನ್ನು ತಕ್ಷಣ ಸ್ಥಗಿತಗೊಳಿಸಿ, 2023ರಿಂದ ಚುನಾವಣಾ ಆಯೋಗ ಕೈಗೊಂಡಿರುವ ಎಲ್ಲಾ ಪ್ರಕ್ರಿಯೆಗಳ ಕುರಿತು ಸುಪ್ರೀಂ ಕೋರ್ಟ್ ಸಮಗ್ರ ತನಿಖೆ ನಡೆಸಬೇಕು ಎಂದು ನಟ ಹಾಗೂ ಎಸ್‌ಐಆರ್ ಪರಿಶೋಧನೆ ಮತ್ತು ಪ್ರತಿರೋಧ ಸಂಘಟನೆಯ ಮುಖಂಡ, ನಟ ಪ್ರಕಾಶ್ ರಾಜ್ ಆಗ್ರಹಿಸಿದರು.

ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸ್‌ಐಆರ್‌ನಿಂದ ಅರ್ಹ ಮತದಾರರ ಹೆಸರುಗಳು ಪಟ್ಟಿಯಿಂದ ಹೊರಗುಳಿಯುವ ಆತಂಕವಿದೆ. ಗಣತಿ ಸಂದರ್ಭದಲ್ಲಿ ಮನೆಯಲ್ಲಿ ಇಲ್ಲದವರು, ಅನಾರೋಗ್ಯ ಪೀಡಿತರು, ವಲಸೆ ಹೋದವರು ಹಾಗೂ ಅಗತ್ಯ ದಾಖಲೆಗಳಿಲ್ಲದವರು ಮತದಾನದ ಹಕ್ಕಿನಿಂದ ವಂಚಿತರಾಗುವ ಸಾಧ್ಯತೆಯಿದೆ ಎಂದು ಹೇಳಿದರು.

ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆಗೆ ಸಮರ್ಪಕ ಕಾಲಾವಕಾಶ ನೀಡಿಲ್ಲ. ಬಿಎಲ್‌ಒಗಳಿಗೆ ಸೂಕ್ತ ಮಾಹಿತಿ ಮತ್ತು ಮಾರ್ಗದರ್ಶನದ ಕೊರತೆಯಿಂದಲೂ ಜನರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಆರೋಪಿಸಿದರು. ರಾಜ್ಯದ ಸುಮಾರು 100 ಮತಗಟ್ಟೆಗಳಲ್ಲಿ ಸಾಮಾಜಿಕ ಸಮೀಕ್ಷೆ ನಡೆಸಿ ಎಸ್‌ಐಆರ್‌ನಲ್ಲಿನ ಲೋಪಗಳನ್ನು ಬಹಿರಂಗಪಡಿಸಲಾಗುವುದು ಎಂದರು.

ಮುಂದಿನ ಸಂಸತ್ ಅಧಿವೇಶನದಲ್ಲಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ಕ್ರಮಕ್ಕೆ ಒತ್ತಾಯಿಸಲಾಗುವುದು. ಅಕ್ಟೋಬರ್‌ನಲ್ಲಿ ದೆಹಲಿಯ ಜಂತರ್ ಮಂತರ್‌ನಲ್ಲಿ 10 ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸುವ ಹಕ್ಕೊತ್ತಾಯ ಕಾರ್ಯಕ್ರಮ ನಡೆಸಲಾಗುವುದು ಎಂದು ಪ್ರಕಾಶ್ ರಾಜ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಎಸ್ಐಆರ್ ಪ್ರತಿಶೋಧ ಮತ್ತು ಪ್ರತಿರೋಧ ಅಭಿಯಾನದ ಮುಖಂಡರಾದ ಕೆ.ಎಲ್.ಅಶೋಕ್, ವಿನೋದ್ ಮಸ್ಕರೇನಸ್, ಅಬ್ದುಲ್ ಮಜೀದ್, ಅಬ್ದುಲ್ ಸಲಾಂ ಸಿ.ಎಚ್. ಸೇರಿದಂತೆ ಹಲವರು ಉಪಸ್ಥಿತರಿದ್ದರು.

- Advertisement -

Latest News

error: Content is protected !!